

ಬೆಂಗಳೂರು: ಇಂದು ಬೆಳಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬೆಂಗಳೂರು ನಾಯಕರ ಸರ್ವಪಕ್ಷ ಸಭೆ ಕರೆದಿದ್ದರು. ಈ ಸಭೆಯಲ್ಲಿ ಬೆಂಗಳೂರು ಎದುರಿಸುತ್ತಿರುವ ಜಲ್ವಂತ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ.
ಡಿಕೆಶಿ ಕರೆದಿದ್ದ ಸಭೆಯಲ್ಲಿ ಬೆಂಗಳೂರು ನಗರದ ಎಲ್ಲ ಶಾಸಕರು, ಸಂಸದರು, ಎಂಎಲ್ಸಿಗಳು, ಸಚಿವರಾದ ಕೆ ಜೆ ಜಾರ್ಜ್, ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ಜಮೀರ್ ಅಹ್ಮದ್, ಸಂಸದರಾದ ಡಿ ಕೆ ಸುರೇಶ್, ತೇಜಸ್ವಿ ಸೂರ್ಯ, ಪಿ ಸಿ ಮೋಹನ್, ರಾಜ್ಯಸಭೆ ಸದಸ್ಯರಾದ ಜಿ ಸಿ ಚಂದ್ರಶೇಖರ್, ಶಾಸಕರಾದ ರಿಜ್ವಾನ್ ಅರ್ಶದ್, ಎ ಸಿ ಶ್ರೀನಿವಾಸ್, ಎ ಕೃಷ್ಣಪ್ಪ, ರವಿ ಸುಬ್ರಮಣ್ಯ, ಟಿ ಎ ಶರವಣ, ಗೋಪಾಲಯ್ಯ, ಗರುಡಾಚಾರ್, ಸಿಎಂ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜ್, ನಜೀರ್ ಅಹ್ಮದ್ ಮತ್ತಿತರರು ಭಾಗವಹಿಸಿದ್ದರು.
ಆದರೆ ವಿಚಿತ್ರ ಎಂದರೆ, ಸಭೆ ಶುರುವಾಗುವುದು ತಡವಾದ ಕಾರಣ ಕೆಲ ಬಿಜೆಪಿ ಶಾಸಕರು ಗೈರಾಗಿದ್ದರೆ. ಇನ್ನು ಕೆಲ ಕಾಂಗ್ರೆಸ್ ನಾಯಕರು ಬೇರೆ ಬೇರೆ ಕಾರಣಗಳಿಗೆ ಡಿಕೆ ಶಿವಕುಮಾರ್ ಕರೆದಿದ್ದ ಸಭೆಗೆ ಬಂದಿಲ್ಲ ಎನ್ನಲಾಗಿದೆ. ಹೀಗಾಗಿ ಉಪಮುಖ್ಯಮಂತ್ರಿ ಕರೆದಿದ್ದ ಬೆಂಗಳೂರು ನಾಯಕರ ಸರ್ವಪಕ್ಷ ಸಭೆ ವಿಫಲವಾಗಿದೆಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಸರಿಯಾದ ಸಮಯಕ್ಕೆ ಬೆಂಗಳೂರು ಸಭೆ ಆರಂಭವಾಗದ ಹಿನ್ನೆಲೆಯಲ್ಲಿ ಬೆಂಗಳೂರು ಬಿಜೆಪಿ ಶಾಸಕರು ಸಭೆಯನ್ನು ಬಾಯ್ಕಾಟ್ ಮಾಡಿದ್ದಾರೆ. ಈ ಸಂದರ್ಭ ಶಾಸಕರಾದ ಅಶ್ವಥ್ ನಾರಾಯಣ, ಮುನಿರತ್ನ, ಸೋಮಶೇಖರ್, ಬೈರತಿ ಬಸವರಾಜ, ಎಸ್ ಆರ್ ವಿಶ್ವನಾಥ್, ಮಂಜುಳಾ ನಿಂಬಾವಳಿ ಮುಂತಾದವರು ಸಭೆ ನಡೆಯಲಿದ್ದ ಜಾಗದಿಂದ ತೆರಳಿದ್ದಾರೆ.
ಸಚಿವ ಜಮೀರ್ ಅಹ್ಮದ್, ಸಭೆಯಿಂದ ಹೊರಬಂದು ಕರೆಯುವ ಪ್ರಯತ್ನ ಮಾಡಿದರೂ ಕ್ಯಾರೇ ಅನ್ನದ ಬಿಜೆಪಿ ಶಾಸಕರು ಅಲ್ಲಿಂದ ತೆರಳಿದ್ದಾರೆ. ಈ ಸಂದರ್ಭ ಸಚಿವ ಜಮೀರ್ ಅಹ್ಮದ್, "ಏಯ್ ಮುನಿ, ಏಯ್ ಮುನಿರತ್ನ ಬಾರಪ್ಪ" ಎಂದು ಕರೆದಿದ್ದಾರೆ. ಅಷ್ಟೊತ್ತಿಗಾಗಲೇ ಬೈರತಿ ಬಸವರಾಜ್, ಸೋಮಶೇಖರ್, ಅಶ್ವಥ್ ನಾರಾಯಣ ಕಳೆಗಿಳಿದು ಹೋಗುತ್ತಿದ್ದರು. ಹೀಗಾಗಿ ಜಮೀರ್ ಮಾತಿಗೆ ಮನ್ನಣೆ ನೀಡದೆ ಬಿಜೆಪಿ ಶಾಸಕರು ತೆರಳಿದ್ದಾರೆ.
ಈ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಗೈರಾಗಿದ್ದರು. ಆದರೆ ಅವರು ದಾವಣಗೆರೆ ಪ್ರವಾಸದಲ್ಲಿದ್ದ ಕಾರಣ ಬೆಂಗಳೂರು ನಾಯಕರ ಸರ್ವಪಕ್ಷ ಸಭೆಗೆ ಹಾಜರಾಗಲು ಸಾಧ್ಯವಿರಲಿಲ್ಲ. ಅವರೊಂದಿಗೆ ದಾವಣಗೆರೆಗೆ ತೆರಳಿದ್ದ ಸಚಿವ ಬೈರತಿ ಸುರೇಶ್ ಕೂಡ ಸಭೆಗೆ ಗೈರಾಗಿದ್ದರು.
ಅದಲ್ಲದೇ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ವಿಜಯನಗರ ಶಾಸಕ ಎಂ. ಕೃಷ್ಣಪ್ಪ, ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡು ಬಿಡಿಎ ಅಧ್ಯಕ್ಷ ಸ್ಥಾನದ ಮೆಲೆ ಕಣ್ಣಿಟ್ಟಿರುವ ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ, ಇಬ್ಬರೂ ಗೈರಾಗಿದ್ದಾರೆ. ತಂದೆ-ಮಗ ಇಬ್ಬರಲ್ಲಿ ಒಬ್ಬರಿಗೂ ಸ್ಥಾನಮಾನ ಸಿಗದ ಕಾರಣ ಸಭೆಗೆ ಗೈರಾಗಿದ್ದಾರೆ ಎನ್ನಲಾಗಿದೆ.
ಇನ್ನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ ಹ್ಯಾರಿಸ್ ಕೂಡ ಗೈರಾಗಿದ್ದರು. ಇವರೂ ಕೂಡ ಸಚಿವ ಸ್ಥಾನ ಸಿಗದಕ್ಕೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ಸಭೆಯನ್ನು ಮೊದಲಿಗೆ 11 ಗಂಟೆಗೆ ಆಯೋಜಿಸಲಾಗಿತ್ತು. ಎಲ್ಲರೂ ಸೇರಿದ್ದರೂ ಡಿ.ಕೆ ಶಿವಕುಮಾರ್ ಮಾತ್ರ ಇನ್ನೂ ಬಂದಿರಲಿಲ್ಲ. ಈ ವಿಚಾರವಾಗಿ ಸಭೆಯಿಂದ ನಿರ್ಗಮಿಸಿದ ಸಮಯದಲ್ಲಿ ಹೇಳಿಕೆ ನೀಡಿದ ಮಲ್ಲೇಶ್ವರಂ ಶಾಸಕ ಅಶ್ವತ್ಥ್ನಾರಾಯಣ್, "ಬೆಂಗಳೂರಲ್ಲಿ ಮಳೆ ಹಾಗೂ ಪ್ರವಾಹ ನಿರ್ವಹಣೆ ಸಲುವಾಗಿ ಸಭೆ ಕರೆಯಲಾಗಿತ್ತು. ನಮಗೆ ಸಭೆಗೆ ಕರೆದು ಒಂದು ಗಂಟೆಯಿಂದ ಡಿ.ಕೆ ಶಿವಕುಮಾರ್ ಕಾಯಿಸಿದ್ದಾರೆ. ಸಭೆಗೆ ತಡವಾಗಿ ಆಗಮಿಸಿದ್ದಾರೆ.
ತಡವಾಗಿ ಆಗಮಿಸುವ ಬಗ್ಗೆ ಮಾಹಿತಿ ನೀಡಿರಲಿಲ್ಲ. ನಿನ್ನೆ ಸಂಜೆ ವಾಟ್ಸಪ್ ಮೂಲಕ ಸಭೆಗೆ ಆಹ್ವಾನ ನೀಡಿದ್ದು ಉದ್ದೇಶಪೂರ್ವಕವಾಗಿ ಈ ನಡವಳಿಕೆ ಪ್ರದರ್ಶಿಸಿದ್ದಾರೆ. ಹೀಗಾಗಿ ಸಭೆಯಿಂದ ನಿರ್ಗಮಿಸುತ್ತಿದ್ದೇವೆ. ಇದು ಬಾಯ್ಕಾಟ್ ಅಲ್ಲ" ಎಂದು ಹೇಳಿದ್ದಾರೆ.