ಕೊಬ್ಬರಿ ಎಣ್ಣೆ ಬಳಕೆ ಹೃದಯದ ಆರೋಗ್ಯಕ್ಕೆ ಪೂರಕವೇ ಮಾರಕವೇ?

Coconut Oil (1)
Published on

ಕಲ್ಪವೃಕ್ಷವೆಂದು ತೆಂಗಿನ ಮರಕ್ಕೆ ಏಕೆ ಕರೆಯುತ್ತಾರೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ತೆಂಗಿನ ಮರದ ಬೇರು, ಎಲೆ, ಹೂ, ಕಾಯಿ, ಒಳಗಿನ ನೀರು, ಕೊನೆಗೆ ಎಣ್ಣೆ ಇದೆಲ್ಲವೂ ಅದ್ಭುತ ಔಷಧಗಳು. ಎಲ್ಲರಿಗೂ ಸುಲಭವಾಗಿ ಸಿಗುವ ಎಳನೀರು, ತೆಂಗಿನ ಕಾಯಿ ಮತ್ತು ತೆಂಗಿನ ಎಣ್ಣೆಗಳ ಬಗ್ಗೆ ಮಾತ್ರ ಇಂದು ತಿಳಿದುಕೊಳ್ಳೋಣ. ಜೊತೆಗೆ ತೆಂಗಿನ ಎಣ್ಣೆಯ ಬಳಕೆಯಿಂದ ಕೊಲೆಸ್ಟೆರಾಲ್ ಹೆಚ್ಚಾಗಿ ಹೃದಯಕ್ಕೆ ಸಮಸ್ಯೆಯಾಗುತ್ತದೆಯೇ ಎಂಬುದರ ಬಗ್ಗೆ ಕೂಡಾ ರ್ಚಚಿಸೋಣ.

Dhanvanthari- Dr Venkataramana Hegade
ಎಳನೀರು ಜೀರ್ಣಕ್ಕೆ ಕಷ್ಟ ಕೊಡದೇ ಶಕ್ತಿಯನ್ನು ನೀಡುತ್ತದೆ. ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ವಿಶೇಷವಾಗಿ ಜೀರ್ಣಾಂಗ ವ್ಯೂಹ, ಮೂತ್ರಾಂಗ ವ್ಯೂಹ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸಲು ಸಹಾಯಮಾಡುತ್ತದೆ. ಪಿತ್ತ ದೋಷವನ್ನು ಚೆನ್ನಾಗಿ ನಿಯಂತ್ರಿಸುತ್ತದೆ. ಹೀಗಾಗಿ ಪಿತ್ತಕ್ಕೆ ಸಂಬಂಧಪಟ್ಟ ಸಮಸ್ಯೆಗಳಲ್ಲಿ ಇದು ಅತ್ಯಂತ ಅನುಕೂಲಕರವಾಗಿದೆ. ಹೀಗಾಗಿ ನೂರಕ್ಕೆ ನೂರರಷ್ಟು ರೋಗಕಾರಕವಾದ, ಮುಂದೆ ದೊಡ್ಡ ಬೆಲೆತೆರುವಂತೆ ಮಾಡುವ ತಂಪು ಪಾನೀಯಗಳ ಬದಲಿಗೆ ಎಳನೀರನ್ನೇ ಸೇವಿಸುವ ರೂಢಿಮಾಡಿಕೊಳ್ಳಬೇಕು. ತೆಂಗಿನಕಾಯಿಯ ತಿರುಳು ಅಂದರೆ ನಾವು ಅಡುಗೆಯಲ್ಲಿ ಬಳಸುವ ತೆಂಗಿನ ತುರಿ ನಿಜಕ್ಕೂ ಅತ್ಯುತ್ತಮವಾದ ಮತ್ತು ನಿತ್ಯವೂ ಸೇವನೆಗೆ ಯೋಗ್ಯವಾದ ಆಹಾರ ಪದಾರ್ಥವಾಗಿದೆ. ದೇಹವನ್ನು ತಂಪಾಗಿಟ್ಟು, ದೇಹಕ್ಕೆ ಶಕ್ತಿಯನ್ನು ಕೊಟ್ಟು, ಜೀರ್ಣಕ್ರಿಯೆ ಸರಿಯಾಗಿ ಇರುವಂತೆ ನೋಡಿಕೊಳ್ಳುತ್ತದೆ.

ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿ ಕೂಡ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಮಾಂಸಧಾತುವಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಆಯುರ್ವೆದ ಗ್ರಂಥಗಳಲ್ಲಿ ಇದನ್ನು ಹೃದ್ಯ ಎಂದು ಕರೆದಿದ್ದಾರೆ. ಅಂದರೆ ಇದು ಹೃದಯಕ್ಕೆ ಶಕ್ತಿಯನ್ನು ಕೊಡುತ್ತದೆ; ಹೊರತು ಹೃದಯದ ಅನಾರೋಗ್ಯಕ್ಕೆ ಕಾರಣವಾಗಲು ಸಾಧ್ಯವಿಲ್ಲ. ಇದನ್ನು ದೇಹದಲ್ಲಿ ಉರಿ ಇರುವವರಿಗೆ, ಪಿತ್ತ ಹೆಚ್ಚಾದವರಿಗೆ, ಗಾಯಗಳಿಂದ ಬಳಲುತ್ತಿರುವವರಿಗೆ, ಧಾತುಕ್ಷಯ ವಾಗಿ ಸೊರಗಿದವರಿಗೆ, ರಕ್ತಸ್ರಾವಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಅನುಭವಿ ಸುತ್ತಿರುವವರಿಗೆ ಕೊಡಬೇಕು ಎಂದು ಗ್ರಂಥಗಳು ಹೇಳುತ್ತವೆ.

ಕೊಬ್ಬರಿ ಎಣ್ಣೆ: ಇನ್ನು ಬಹಳಷ್ಟು ಜನರಲ್ಲಿ ಗೊಂದಲಕ್ಕೀಡು ಮಾಡಿರುವ ಕೊಬ್ಬರಿ ಎಣ್ಣೆಯ ಬಗ್ಗೆ ತಿಳಿದುಕೊಳ್ಳೋಣ. ಆಯುರ್ವೆದದ ಪ್ರಕಾರ ಕೊಬ್ಬರಿ ಎಣ್ಣೆ ತಂಪು ಗುಣವನ್ನು ಹೊಂದಿದ್ದು ಜೀರ್ಣಕ್ರಿಯೆಗೆ ಹೆಚ್ಚು ಹೊತ್ತು ತೆಗೆದುಕೊಳ್ಳುತ್ತದೆ. ಈ ಕಾರಣದಿಂದಾಗಿ ಇದನ್ನು ಸೇವಿಸಿದಾಗ ಬಹಳ ಬೇಗ ಹಸಿವಾಗುವುದಿಲ್ಲ. ಹಾಗಾಗಿ ಇದು ಬೊಜ್ಜಿನಲ್ಲಿಯೂ ಕೂಡಾ ಅನುಕೂಲಕರ. 40 ಜನ ಮಹಿಳೆಯರ ಮೇಲೆ ಮಾಡಿದ ಒಂದು

ಸಂಶೋಧನೆಯ ಪ್ರಕಾರ ಕೊಬ್ಬರಿ ಎಣ್ಣೆಯನ್ನು ಬಳಸಿದ ಮಹಿಳೆ ಯರಲ್ಲಿ ತೂಕ ಇಳಿಯುವಿಕೆ ವೇಗವಾಗಿತ್ತು ಮತ್ತು ಇದರಿಂದ ಕೊಲೆಸ್ಟೆರಾಲ್ ಹೆಚ್ಚಾಗಿರಲಿಲ್ಲ. ಒಂದು ವೇಳೆ ಒಟ್ಟೂ ಕೊಲೆಸ್ಟೆರಾಲ್ ಹೆಚ್ಚಾದಂತೆ ಕಂಡರೂ ಆಕ್ಸಿಡೈಸ್ಡ್ ಕೊಲೆಸ್ಟೆರಾಲ್ ಅಂದರೆ ವಿಕೃತಗೊಂಡ ಕೊಲೆಸ್ಟೆರಾಲ್ ಕಡಿಮೆಯಾಗಿ ಒಳ್ಳೆಯ ಕೊಲೆಸ್ಟೆರಾಲ್ ಹೆಚ್ಚಾಗಿರುತ್ತದೆ. ಹಾಗಾಗಿ ಇದು ಹೃದಯಕ್ಕಾಗಲೀ ದೇಹದ ಇನ್ನಾವುದೇ ಅಂಗಕ್ಕಾಗಲೀ ಕೆಟ್ಟದ್ದನ್ನು ಉಂಟುಮಾಡುವುದಿಲ್ಲ. ಇದು ಕೂದಲಿನ ಆರೋಗ್ಯಕ್ಕೆ ಅತ್ಯಂತ ಶ್ರೇಷ್ಠವಾದದ್ದು. ತೆಂಗಿನ ಎಣ್ಣೆಯನ್ನು ಹೊಟ್ಟೆಗೆ ಸೇವಿಸುವುದು ಮತ್ತು ತಲೆಗೆ ಹಚ್ಚುವ ಮೂಲಕ ಕೂದಲಿನ ಆರೋಗ್ಯವನ್ನು ತುಂಬಾ ಚೆನ್ನಾಗಿ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ.

ಶ್ವಾಸಾಂಗ ವ್ಯೂಹದ ಆರೋಗ್ಯಕ್ಕೆ ಕೂಡಾ ಇದು ತುಂಬಾ ಅನುಕೂಲಕರ. ತೆಂಗಿನ ಎಣ್ಣೆಯಲ್ಲಿ ಲಾರಿಕ್ ಆಸಿಡ್ ಹೆಚ್ಚಾಗಿರುವುದರಿಂದ ಇದು ನಮಗೆ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿಯನ್ನು ಕೊಡುತ್ತದೆ. ಒಟ್ಟಿನಲ್ಲಿ ಯಾವುದೋ ದೇಶದ ಎಣ್ಣೆಯನ್ನು ಅಥವಾ ವಿಕೃತವಾಗಿ ಅಥವಾ ಕೃತಕವಾಗಿ ತಯಾರಿಸಿದ ರಿಫೈನ್ಡ್ ಎಣ್ಣೆ ಅಥವಾ ಪದಾರ್ಥಗಳನ್ನು ಬಳಸುವ ಬದಲು ನಮ್ಮದೇ ನೆಲದಲ್ಲಿ ಬೆಳೆದ, ಕಲ್ಪವೃಕ್ಷ ಕೊಟ್ಟ ಅಮೃತ ಸಮಾನ ಪದಾರ್ಥಗಳನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳೋಣ.

(ಪ್ರತಿಕ್ರಿಯಿಸಿ: vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net