

ಬೆಂಗಳೂರು: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ಶಿಬಿರದಲ್ಲಿರುವ ಅನುಭವಿ ವೇಗಿ ಮೊಹಮದ್ ಶಮಿ ಮುಂಬರುವ ಬಾರ್ಡರ್-ಗಾವಸ್ಕರ್ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯ ಟೆಸ್ಟ್ ಸರಣಿಗೆ ಫಿಟ್ ಆಗುವ ನಿರೀಕ್ಷೆ ಹರಡಿದೆ. 34 ವರ್ಷದ ಶಮಿ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಂಟರ್ ಪಿಚ್‌ನಲ್ಲಿ
ಕೆಲ ಹೊತ್ತು ಬೌಲಿಂಗ್ ಅಭ್ಯಾಸ ನಡೆಸಿದರು. ಭಾರತ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್‌ಗೆ ಬೌಲಿಂಗ್ ಮಾಡಿದ ಶಮಿ, ಉತ್ತಮ ಲಯದಲ್ಲಿ ಕಾಣಿಸಿಕೊಂಡರು.ಮೊಣಕಾಲಿಗೆ ಪಟ್ಟಿಯನ್ನು ಧರಿಸಿ ಸುಮಾರು ಎರಡು ಗಂಟೆ ಬೆವರು ಹರಿಸಿದ ಶಮಿ, ಫೀಲ್ಡಿಂಗ್ ಅಭ್ಯಾಸವೂ ನಡೆಸಿದರು. ಬೌಲಿಂಗ್ ಕೋಚ್ ಮೊರ್ನೆ ಮಾರ್ಕೆಲ್ ಕೆಲ ಟಿಪ್ಸ್ ನೀಡಿದರು. ಬಾಂಗ್ಲಾದೇಶ ವಿರುದ್ಧ ಸರಣಿಯ ಬಳಿಕ ನ್ಯೂಜಿಲೆಂಡ್ ವಿರುದ್ಧವೂ ವೇಗಿ ಮೊಹಮದ್ ಸಿರಾಜ್ ಬೌಲಿಂಗ್‌ನಲ್ಲಿ ಪರಿಣಾಮಕಾರಿ ಎನಿಸಿಲ್ಲ. ಇದರಿಂದ ಭಾರತ ತಂಡದಲ್ಲಿ ಜಸ್‌ಪ್ರೀತ್ ಬುಮ್ರಾಗೆ ಸಾಥ್ ನೀಡಬಲ್ಲ ಅನುಭವಿ ವೇಗಿಗಳ ಕೊರತೆ ಕಾಣಿಸಿದೆ. ಮುಂದಿನ ಆಸ್ಟ್ರೇಲಿಯಾ ಪ್ರವಾಸದ ವೇಳೆಗೆ ಶಮಿ ಫಿಟ್ ಆದರೆ ಭಾರತದ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ಸಿಗಲಿದೆ.
ಎರಡನೇ ಪಂದ್ಯಕ್ಕೆ ಗಿಲ್ ಫಿಟ್! ಮೊದಲ ಟೆಸ್ಟ್ ಪಂದ್ಯದ ಸೋಲಿನ ನಡುವೆಯೂ ಭಾರತಕ್ಕೆ ಗುಡ್‌ನ್ಯೂಸ್ ಸಿಕ್ಕಿದೆ. ಬೆಂಗಳೂರು ಟೆಸ್ಟ್ ಆರಂಭಕ್ಕೂ ಮುನ್ನ ಕುತ್ತಿಗೆಗೆ ಸಂಬಂಧಿಸಿದ ನೋವಿನಿಂದ ಬಳಲಿದ್ದ ಶುಭಮಾನ್‌ಗಿಲ್ ಹನ್ನೊಂದರ ಬಳಗದ ಆಯ್ಕೆಗೆ ಅಲಭ್ಯರಾದರು. ಆದರೆ ಮೊದಲ ಟೆಸ್ಟ್ ಮುಕ್ತಾಯದ ಬಳಿಕ ಭಾರತದ ಪ್ರಮುಖ ಆಟಗಾರರು ಹೋಟೆಲ್‌ಗೆ ತೆರಳಿದ ಬಳಿಕವೂ ಕ್ರೀಡಾಂಗಣದಲ್ಲಿ ಉಳಿದ ಗಿಲ್, ಪ್ಯಾಡ್ ಕಟ್ಟಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಇದರೊಂದಿಗೆ ಮುಂದಿನ ಪಂದ್ಯಕ್ಕೆ ಮುನ್ನ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಸುಳಿವು ನೀಡಿದ್ದಾರೆ. ಇವರಿಗೆ ಕನ್ನಡಿಗ, ವೇಗಿ ಪ್ರಸಿದ್ಧ ಕೃಷ್ಣ ಪ್ರಸಿದ್ಧ ಕೃಷ್ಣ ಬೌಲಿಂಗ್ ಅಭ್ಯಾಸದ ಮೂಲಕ ಸಾಥ್ ನೀಡಿದರು. ಭಾರತ ಟೆಸ್ಟ್ ತಂಡದ ಮೀಸಲು ಆಟಗಾರ ಎನಿಸಿರುವ ಪ್ರಸಿದ್ಧ, ಹಾಲಿ ರಣಜಿ ಟೂರ್ನಿಯಲ್ಲಿ ಮಧ್ಯಪ್ರದೇಶ ಎದುರು ಗಾಯದ ಸಮಸ್ಯೆಗೆ ಒಳಗಾಗಿದ್ದರು.ಮೊದಲ ದಿನದ ಆಟದ ಬಳಿಕ ಬೌಲಿಂಗ್ ನಡೆಸಿರಲಿಲ್ಲ. ಇದೀಗ ಫಿಟ್ ಆಗಿ ಟೀಮ್ ಇಂಡಿಯಾ ಮೀಸಲುಯುವ ವೇಗಿಗಳ ತಂಡ ಕೂಡಿಕೊಂಡಿದ್ದಾರೆ.