

ಬುಧವಾರ ಬೆಳಿಗ್ಗೆ ನಿಧನರಾದ ಬಾಲಿವುಡ್‌ನ ಜನಪ್ರಿಯ ನಟ ಇರ್ಫಾನ್ ಖಾನ್, ಕನ್ನಡ ಚಿತ್ರವೊಂದರಲ್ಲಿ ನಟಿಸಬೇಕಿತ್ತು ಎಂಬ ವಿಷಯ ಗೊತ್ತೇ? ಗೊತ್ತಿಲ್ಲದಿದ್ದರೆ ಕೇಳಿ. ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಬೇಕು ಎಂದು ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೊರಟಿದ್ದರಂತೆ. ಆದರೆ, ಅದು ಕೊನೆಗೂ ಸಾಧ್ಯವಾಗಲಿಲ್ಲ ಎಂದು ಬೇಸರಿಸಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಐದು ವರ್ಷದ ಹಿಂದೆ ಇರ್ಫಾನ್ ಖಾನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಬೇಕು ಎಂದು ಪ್ರಯತ್ನ ಪಟ್ಟಿದ್ದೆ. ಗಾಂಧಿವಾದಿ ಪ್ರಸನ್ನ ಅವರ ಮೂಲಕ ಸಂಪರ್ಕ ಮಾಡಿದ್ದೆ. ಅನಾರೋಗ್ಯದಿಂದಾಗಿ ನಟಿಸುವುದು ಸಾಧ್ಯವಿಲ್ಲ ಎಂದು ಅವರು ಹೇಳಿಕೊಂಡಿದ್ದರು. ಅಮಿತಾಭ್ ಬಚ್ಚನ್ ಅವರ ನಂತರ, ಅವರಂಥ ಅದ್ಭುತ ನಟನನ್ನು ಕನ್ನಡ ಚಿತ್ರರಂಗಕ್ಕೆ ಕರೆತರಬೇಕು ಎನ್ನುವುದು ನನ್ನಾಸೆಯಾಗಿತ್ತು. ಅದು ಸಾಧ್ಯವಾಗಲೇ ಇಲ್ಲ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ನಾಗತಿಹಳ್ಳಿ ಟ್ವೀಟ್ ಮಾಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ನ್ಯೂರೋಎಂಡೋಕ್ರೈಮ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇರ್ಫಾನ್, ಬುಧವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗಿದೆ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾರೆ.