

ಬೈಂದೂರು: ಕೊಲ್ಲೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಅದರೆ ಹೆದ್ದಾರಿ ಪ್ರಾಧಿಕಾರ ಕಾಮಗಾರಿ ಬಗ್ಗೆ ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಗೋಳಿಹೊಳೆ ಗ್ರಾಪಂ ವ್ಯಾಪ್ತಿಯ ಸಂಭಾವ್ಯ ಸಂತ್ರಸ್ತ ಕುಟುಂಬಗಳು ಪಂಚಾಯಿತಿ ಸಭಾಭವನದಲ್ಲಿ ಸಭೆ ನಡೆಸಿ ಚರ್ಚಿಸಿದರು.
ಗ್ರಾಪಂ ಅಧ್ಯಕ್ಷ ವಸಂತ ಹೆಗ್ಡೆ ಮಾತನಾಡಿ, ಬೈಂದೂರು-ಕೊಲ್ಲೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಆದರೆ ಹೆದ್ದಾರಿ ಪ್ರಾಧಿಕಾರ ಕಾಮಗಾರಿ ಬಗ್ಗೆ ಜನರಿಗಾಗಲಿ ಅಥವಾ ಸಂಬಂಧಿತ ಗ್ರಾಪಂಗಾಗಲಿ ಸಮರ್ಪಕ ಮಾಹಿತಿ ನೀಡದೆ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದೆ. ವಿಸ್ತರಣೆಗೆ ಸರ್ವೇ ಕಾರ್ಯ ನಡೆದಿದ್ದು, ನೀಲಿನಕಾಶೆ ಸಿದ್ಧಗೊಂಡಿದೆ ಎಂದು ಮಾಧ್ಯಮಗಳ ಮೂಲ ತಿಳಿದಿದೆಯೇ ಹೊರತು ಸಂಭಾವ್ಯ ಸಂತ್ರಸ್ತ ಕುಟುಂಬಗಳಿಗೆ ಸರಿಯಾದ ಮಾಹಿತಿಯಿಲ್ಲ ಎಂದರು.
ಬೈಂದೂರು-ಕೊಲ್ಲೂರು ಹೆದ್ದಾರಿ ವಿಸ್ತರಣೆ ಕಾಮಗಾರಿ ಬಗ್ಗೆ ಜನರಿಗೆ ಶೀಘ್ರ ಸ್ಪಷ್ಟ ಮಾಹಿತಿ ನೀಡುವಂತೆ ಹಾಗೂ ಕಾಮಗಾರಿಗಾಗಿ ಭೂಮಿ ಕಳೆದುಕೊಳ್ಳುವ ಸಂತ್ರಸ್ತ ಕುಟುಂಬಗಳಿಗೆ ಗರಿಷ್ಠ ಪರಿಹಾರ ನೀಡುವಂತೆ ಕೋರಿ ಭೂಸ್ವಾಧೀನಾಕಾಧಿಕಾರಿಯಾಗಿರುವ ಕುಂದಾಪುರ ಸಹಾಯಕ ಕಮೀಷನರ್ಗೆ ಗ್ರಾಮಸ್ಥರಿಂದ ಮನವಿ ಸಲ್ಲಿಸಲಾಗುವುದು. ಗರಿಷ್ಠ ಪರಿಹಾರ ದೊರಕದ ಹೊರತು ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.