

ವಿಜಯಪುರ: ಮಾಜಿ ಯೋಧ, ಇಂಡಿಯನ್ ರಿಸರ್ವ್ ಬೆಟಾಲಿಯನ್ (ಐಆರ್‌ಬಿ) ಪೊಲೀಸ್ ರಾಜಕುಮಾರ ಲಕ್ಷ್ಮಣ ಗೋಟ್ಯಾಳ (42) ಹೃದಯಾಘಾತದಿಂದ ಸಾವಿಗೀಡಾಗಿದರು. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದ ನಿವಾಸಿಯಾಗಿರುವ ಇವರು ಜಾರ್ಖಂಡ್ನಲ್ಲಿ ಹೃದಯಾಘಾತಕ್ಕೀಡಾಗಿದ್ದರು.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಇವರು ನಿವೃತ್ತಿ ಬಳಿಕ ಐಆರ್‌ಬಿ ಪೊಲೀಸ್ ಹುದ್ದೆಗೆ ಸೇರ್ಪಡೆಯಾಗಿದ್ದರು. ಹಾಲಿ ವಿಜಯಪುರದ ರಾಮದೇವನಗರದಲ್ಲಿ ವಾಸವಾಗಿದ್ದ ರಾಜಕುಮಾರ ಗೋಟ್ಯಾಳ ಇವರು ವಿಜಯಪುರ ಜಿಲ್ಲೆಯ ಐಆರ್‌ಬಿ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇದನ್ನೂ ಓದಿ: ಮುತ್ತಲ್ಲೂ ಮೋಸ: ಐನೂರಕ್ಕೂ ಹೆಚ್ಚು ಮಂದಿಗೆ ವಂಚನೆ
ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಜಾರ್ಖಂಡ್‌ಗೆ ಇಲಾಖೆ ವತಿಯಿಂದ ತರಬೇತಿಗೆ ತೆರಳಿದ್ದರು. ಏಪ್ರಿಲ್ ಮೊದಲ ವಾರದಲ್ಲಿ ತರಬೇತಿ ಮುಕ್ತಾಯಗೊಳ್ಳಲಿದ್ದು ತವರಿಗೆ ವಾಪಸ್ ಆಗಲಿದ್ದರು. ಅಷ್ಟೊತ್ತಿಗಾಗಲೇ ತರಬೇತಿ ಸಮಯದಲ್ಲೇ ಶನಿವಾರ ಬೆಳಗ್ಗೆ 8ಕ್ಕೆ ಹೃದಯಾಘಾತಕ್ಕೆ ಒಳಗಾದರು. ಪತ್ನಿ, ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಇವರು ಅಗಲಿದ್ದಾರೆ. ಭಾನುವಾರ ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.