

Iran-Israel Conflict: ಭಾರತೀಯ ವಾಯುಯಾನ ಇತಿಹಾಸದಲ್ಲೇ ಅತ್ಯಂತ ಭೀಕರ ಅಪಘಾತ ಅಹಮದಾಬಾದ್ನ ಏರ್ ಇಂಡಿಯಾ ವಿಮಾನ ಪತನ. ಕೇವಲ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕಿದರೆ, ಉಳಿದ ಎಲ್ಲ 241 ಪ್ರಯಾಣಿಕರು ಮತ್ತು ಸಿಬ್ಬಂದಿ ದುರಂತ ಅಂತ್ಯ ಕಂಡಿದ್ದಾರೆ. ಅಲ್ಲದೆ, ವಿಮಾನ, ಮೇಘನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಕೂಡ ಸಾವಿಗೀಡಾಗಿದ್ದಾರೆ. ಈ ಘಟನೆಯಿಂದ ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿರುವಾಗ ಮಹಿಳಾ ಜ್ಯೋತಿಷಿಯೊಬ್ಬರು ನುಡಿದಿದ್ದ ಭವಿಷ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು.
ಎಕ್ಸ್ ಖಾತೆಯಲ್ಲಿ ಜ್ಯೋತಿಷಿ ಶರ್ಮಿಷ್ಠಾ ಎಂಬುವರು, ವಿಮಾನ ಪತನದ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದರು. ಇದೀಗ ಆ ಭವಿಷ್ಯವಾಣಿಯನ್ನು ಮತ್ತೆ ನೆನಪಿಸಿದ್ದಾರೆ. 2025ರಲ್ಲಿ ಘೋರ ವಿಮಾನ ದುರಂತ ಖಂಡಿತವಾಗಿಯೂ ಸಂಭವಿಸುತ್ತದೆ ಎಂದು ಶರ್ಮಿಷ್ಠಾ ಭವಿಷ್ಯ ನುಡಿದಿದ್ದರು. ಅಲ್ಲದೆ, ಇದುವರೆಗಿನ ಅತ್ಯಂತ ಕೆಟ್ಟ ವಿಮಾನ ಅಪಘಾತ ಇದಾಗಲಿದೆ ಎಂದೂ ಹೇಳಿದ್ದರು. ಇದೇ ಜೂನ್ 5ರಂದು ತಮ್ಮ ಜಾಲತಾಣದ ಖಾತೆಯಲ್ಲಿ ಈ ಭವಿಷ್ಯ ನುಡಿಯನ್ನು ಹಂಚಿಕೊಂಡಿದ್ದರು. ಅವರೇಳಿದ ಒಂದೇ ವಾರದಲ್ಲಿ ಅಂದರೆ, ಜೂನ್ 12ರಂದು ಈ ದುರ್ಘಟನೆ ಸಂಭವಿಸಿತು. ಇದು ಹಲವರ ಅಚ್ಚರಿಗೂ ಕಾರಣವಾಗಿದೆ.
ಇದೇ ರೀತಿ ಇದೀಗ ಮತ್ತೊಂದು ಭವಿಷ್ಯವಾಣಿ ನುಡಿದಿದ್ದಾರೆ. ಪ್ರಸ್ತುತ ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ಭೀತಿ ಎದುರಾಗಿದ್ದು, ಎರಡೂ ದೇಶಗಳಿಂದ ಭೀಕರ ಕ್ಷಿಪಣಿ, ಡ್ರೋನ್ಗಳ ದಾಳಿ ನಡೆಯುತ್ತಿವೆ. ಇರಾನ್-ಇಸ್ರೇಲ್ ವೈಮಾನಿಕ ದಾಳಿಯಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ದಿನದಿಂದ ದಿನಕ್ಕೆ ಎರಡೂ ದೇಶಗಳ ಮಧ್ಯೆ ಪರಿಸ್ಥಿತಿ ತೀವ್ರ ಹದಗೆಡುತ್ತಿದೆ. ಈ ಕುರಿತಂತೆ ಭವಿಷ್ಯ ನುಡಿದಿರುವ ಶರ್ಮಿಷ್ಠಾ, "ರಷ್ಯಾ-ಯುಕ್ರೇನ್ನಂತೆ ಇರಾನ್-ಇಸ್ರೇಲ್ ನಡುವಿನ ಸಂಘರ್ಷ ದೀರ್ಘಕಾಲದವರೆಗೂ ಹೋಗೋದಿಲ್ಲ" ಎಂದಿದ್ದಾರೆ.