ರೂಫ್ ಟಾಪ್​‌ನಲ್ಲಿ ಚುಂಬನ, ಕ್ರೀಡಾಪಟು ಬಂಧನ!

Alireza Japalaghy_web
Published on

ಟೆಹ್ರಾನ್: ಇನ್‌ಸ್ಟಾಗ್ರಾಂನಲ್ಲಿ ರೊಮ್ಯಾಂಟಿಕ್ ವಿಡಿಯೋ ಪ್ರಕಟಿಸಿದ ಇರಾನ್ ಕ್ರೀಡಾಪಟು ಅಲಿರೆಜಾ ಜಪಲಘಿ ಬಂಧನಕ್ಕೊಳಗಾಗಿದ್ದಾರೆ. ರೂಫ್ ಟಾಪ್‌ನಲ್ಲಿ ಮಹಿಳೆಯೊಬ್ಬಳನ್ನು ಚುಂಬಿಸುತ್ತಿರುವ ಸರಣಿ ವಿಡಿಯೋಗಳನ್ನು ಪ್ರಕಟಿಸಿರುವ ಜಪಲಘಿ ಅವರನ್ನು, ಅಶ್ಲೀಲ ವರ್ತನೆ ತೋರಿದ ಆರೋಪದ ಮೇರೆಗೆ ಟೆಹ್ರಾನ್ ಸೈಬರ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಫ್ರಾನ್ಸ್​ ಮೂಲದ ಸಾಹಸ ಕ್ರೀಡೆ ಪಾರ್ಕೌರ್‌ನಲ್ಲಿ ಮಿಂಚುತ್ತಿರುವ ಅಲಿರೆಜಾ ಜಪಲಘಿ ಇನ್‌ಸ್ಟಾಗ್ರಾಂನಲ್ಲಿ 1.33 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ. ಟೆಹ್ರಾನ್‌ನ ರೆಸಿಡೆನ್ಶಿಯಲ್ ಬಿಲ್ಡಿಂಗ್ ಒಂದರ ಚಾವಣಿ ಮೇಲೆ ಅಲಿರೆಜಾ ಜಪಲಘಿ, ಮಾದಕ ಉಡುಪು ತೊಟ್ಟಿರುವ ಅಪರಿಚಿತ ಮಹಿಳೆಯೊಬ್ಬಳನ್ನು ಚುಂಬಿಸುತ್ತಿರುವ ವಿಡಿಯೋ ಚಿತ್ರೀಕರಿಸಿದ್ದು, ಕಳೆದ ವಾರದ ಇದರ ಸರಣಿ ಚಿತ್ರಗಳನ್ನೂ ಪ್ರಕಟಿಸಿದ್ದರು.

ಇರಾನ್‌ನಲ್ಲಿ ಇಸ್ಲಾಮಿಕ್ ವಸ್ತ್ರಸಂಹಿತೆಯ ಅನ್ವಯ ಮಹಿಳೆಯರು ಮುಖ, ಕೈ ಮತ್ತು ಪಾದವನ್ನು ಮಾತ್ರ ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶಿಸಲು ಅವಕಾಶವಿದೆ. ಚಿತ್ರ ಮತ್ತು ವಿಡಿಯೋದಲ್ಲಿ ಅಲಿರೆಜಾ ಜಪಲಘಿ ಜತೆಗೆ ಕಾಣಿಸಿಕೊಂಡಿರುವ ಮಹಿಳೆಯನ್ನೂ ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಟೆಹ್ರಾನ್‌ನ ಪೊಲೀಸ್ ಮುಖ್ಯಸ್ಥ ಹುಸೇನ್ ರಹಿಮಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net