

ಲಂಡನ್: ವೆಸ್ಟ್ ಇಂಡೀಸ್ ಕ್ರಿಕೆಟಿಗರು ಶಿಸ್ತು, ಕ್ರೀಡಾಸ್ಫೂರ್ತಿಯ ಆಟಕ್ಕೆ ಹೆಸರುವಾಸಿ. ಅವರ ಆಟಕ್ಕೆ ತವರು ನೆಲವಷ್ಟೇ ಅಲ್ಲ, ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಅಭಿಮಾನಿಗಳಿದ್ದಾರೆ. ಆದರೆ ಕ್ರಿಕೆಟ್ ಆಡಳಿತದ ವಿಷಯದಲ್ಲಿ ಮಾತ್ರ ವೆಸ್ಟ್ ಇಂಡೀಸ್ ಕ್ರಿಕೆಟ್‌ನಲ್ಲಿ ಆಗಾಗ ವಿವಾದಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಬಿಸಿಸಿಐ ನೀಡಿದ ದೇಣಿಗೆ ಮೊತ್ತವನ್ನೂ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ (ಸಿಡಬ್ಲ್ಯುಐ) ದುರ್ಬಳಕೆ ಮಾಡಿಕೊಂಡಿದೆ ಎಂದು ಇದೀಗ ಆರೋಪ ಕೇಳಿಬಂದಿದೆ. ಕೆರಿಬಿಯನ್ ವೇಗದ ಬೌಲಿಂಗ್ ದಿಗ್ಗಜ ಮೈಕೆಲ್ ಹೋಲ್ಡಿಂಗ್ ಈ ಆರೋಪ ಮಾಡಿದ್ದಾರೆ.
ಯುಟ್ಯೂಬ್ ಶೋ ಒಂದರಲ್ಲಿ ಮೈಕೆಲ್ ಹೋಲ್ಡಿಂಗ್ ವಿಂಡೀಸ್ ಮಂಡಳಿಯ ಲೆಕ್ಕಪತ್ರವನ್ನು ಪ್ರಶ್ನಿಸಿದ್ದಾರೆ. ‘2013-14ರಲ್ಲಿ ಬಿಸಿಸಿಐ, ಕೆರಿಬಿಯನ್ ಮಾಜಿ ಕ್ರಿಕೆಟಿಗರ ನೆರವಿಗಾಗಿ ಅರ್ಧ ಮಿಲಿಯನ್ ಡಾಲರ್ (3.77 ಕೋಟಿ ರೂಪಾಯಿ) ಮೊತ್ತದ ನೆರವು ನೀಡಿತ್ತು. ನಾನೂ ಒಬ್ಬ ಮಾಜಿ ಆಟಗಾರ. ನನಗೆ ಆ ಮೊತ್ತದಲ್ಲಿ ಪಾಲು ಬೇಕಿರಲಿಲ್ಲ. ಆದರೆ ನನಗೆ ತಿಳಿದ ಮಟ್ಟಿಗೆ ಬಹಳಷ್ಟು ಮಾಜಿ ಆಟಗಾರರಿಗೆ ಆ ಮೊತ್ತದಲ್ಲಿ ಎಳ್ಳಷ್ಟೂ ಲಭಿಸಿಲ್ಲ. ಆ ಅರ್ಧ ಮಿಲಿಯನ್ ಡಾಲರ್‌ನಲ್ಲಿ ಶೇ. 1ರಷ್ಟು ಮೊತ್ತವೂ ಮಾಜಿ ಕ್ರಿಕೆಟಿಗರ ಕೈಸೇರಿಲ್ಲ. ಒಂದು ವೇಳೆ ಸಿಡಬ್ಲ್ಯುಐ ಆ ಮೊತ್ತವನ್ನು ಮಾಜಿ ಕ್ರಿಕೆಟಿಗರಿಗೆ ತಲುಪಿಸಿದ್ದರೆ ದೊಡ್ಡ ಮಟ್ಟದ ಪ್ರಚಾರವನ್ನೇ ಪಡೆದುಕೊಳ್ಳುತ್ತಿತ್ತು. ಆ ಅರ್ಧ ಮಿಲಿಯನ್ ಡಾಲರ್ ಎಲ್ಲಿಗೆ ಹೋಯಿತು? ಆ ಬಗ್ಗೆ ಶೀಘ್ರದಲ್ಲೇ ವೀಕ್ಷಕರಿಗೆ ತಿಳಿಸುತ್ತೇನೆ’ ಎಂದು 66 ವರ್ಷದ ಹೋಲ್ಡಿಂಗ್ ಹೇಳಿದ್ದಾರೆ.
ಸಿಡಬ್ಲ್ಯುಐ ಲೆಕ್ಕಪತ್ರವನ್ನು ಇದುವರೆಗೆ ಬಹಿರಂಗಪಡಿಸಿಲ್ಲ. ಯಾಕೆಂದರೆ ಅದರ ವರದಿ ಉತ್ತಮವಾಗಿಲ್ಲ. ಅದು ಹಲವಾರು ಲೋಪದೋಷಗಳಿಂದ ಕೂಡಿದೆ ಎಂದು ಹೋಲ್ಡಿಂಗ್ ಆರೋಪಿಸಿದ್ದಾರೆ. 1975ರಿಂದ 1987ರ ನಡುವೆ ವಿಂಡೀಸ್ ಪರ ಆಡಿದ್ದ ಹೋಲ್ಡಿಂಗ್ 60 ಟೆಸ್ಟ್, 102 ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 249 ಮತ್ತು 142 ವಿಕೆಟ್ ಕಬಳಿಸಿದ್ದಾರೆ. ಅವರು ಈಗ ವೀಕ್ಷಕವಿವರಣೆಕಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.