10 ಕೋಟಿ ರೂ. ಆಸ್ತಿ ಮಾಡಿ ಸಸ್ಪೆಂಡಾದ ಐಪಿಎಸ್​ ಅಧಿಕಾರಿ! ದೇಶದ್ರೋಹದ ಕೇಸ್ ದಾಖಲು

gpsingh
Published on

ರಾಯ್‌ಪುರ: ಆದಾಯಕ್ಕೆ ಮೀರಿದ ಆಸ್ತಿಗಳನ್ನು ಹೊಂದಿದ ಆರೋಪದ ಮೇಲೆ ಕೆಲವು ದಿನಗಳ ಹಿಂದೆ ಸಸ್ಪೆಂಡ್​ ಆದ ಛತ್ತೀಸಗಡದ ಐಪಿಎಸ್​ ಅಧಿಕಾರಿ ಜಿ.ಪಿ.ಸಿಂಗ್​ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಮತ್ತು ಆರ್ಥಿಕ ಅಪರಾಧಗಳ ವಿಭಾಗ(ಇಒಡಬ್ಲ್ಯೂ) ನಡೆಸಿದ ದಾಳಿಗಳಲ್ಲಿ ಲಭ್ಯವಾಗಿರುವ ಕೆಲವು ದಾಖಲಾತಿಗಳ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಎಸಿಬಿ ಮತ್ತು ಇಒಡಬ್ಲ್ಯೂನ ಎಡಿಜಿಯಾಗಿದ್ದ 1994ರ ಬ್ಯಾಚ್ ಅಧಿಕಾರಿಯಾದ ಸಿಂಗ್, ಜುಲೈ 5 ರಂದು ಅಮಾನತುಗೊಂಡಾಗ, ರಾಜ್ಯ ಪೊಲೀಸ್ ಅಕಾಡೆಮಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಜುಲೈ 1 ರಿಂದ 3 ನೇ ತಾರೀಖಿನವರೆಗೆ ಸಿಂಗ್​ಗೆ ಸಂಬಂಧಿಸಿದ 15 ಸ್ಥಳಗಳಲ್ಲಿ ಎಸಿಬಿ ಮತ್ತು ಇಒಡಬ್ಲ್ಯೂ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಸಿಂಗ್​, ಸುಮಾರು 10 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಹೊಂದಿರುವುದು ಬೆಳಕಿಗೆ ಬಂದಿತ್ತು ಎನ್ನಲಾಗಿದೆ.

ದಾಳಿಯಲ್ಲಿ ಸರ್ಕಾರದ ವಿರುದ್ಧ ದ್ವೇಷ ಮತ್ತು ಸಂಚು ನಡೆಸುವಂಥ ದಾಖಲಾತಿಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 124ಎ(ದೇಶದ್ರೋಹ) ಮತ್ತು 153ಎ(ವಿವಿಧ ಗುಂಪುಗಳ ಜನರಲ್ಲಿ ವೈಷಮ್ಯ ಹರಡುವುದು) ಅಡಿಯಲ್ಲಿ ರಾಯ್ಪುರದ ನಗರ ಕೋತ್ವಾಲಿ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ ಎಸ್​​ಎಸ್ಪಿ ಅಜಯ್ ಯಾದವ್ ತಿಳಿಸಿದ್ದಾರೆ. ಮುಂದಿನ ತನಿಖೆ ಆರಂಭವಾಗಿದೆ ಎಂದಿದ್ದಾರೆ.

ಜಿ.ಪಿ.ಸಿಂಗ್​ ಅವರ ರಾಯಪುರದ ಪೆನ್ಷನ್ ಬಾಡಾ ನಿವಾಸದಲ್ಲಿ ಮನೆಯಲ್ಲಿ ಸಿಕ್ಕ ಕೆಲವು ಹರಿದುಹಾಕಿದ ಕಾಗದಗಳಲ್ಲಿ ಗಂಭೀರವಾದ ಆಕ್ಷೇಪಾರ್ಹ ವಿಚಾರಗಳು ಬರೆಯಲ್ಪಟ್ಟಿದ್ದವು. ಅವರ ಸಹಚರ ಮಣಿ ಭೂಷಣ್​ ಎಂಬುವರ ಮನೆಯಲ್ಲಿ 5 ಪುಟಗಳ ದಾಖಲಾತಿ ಸಿಕ್ಕಿದ್ದು, ಸರ್ಕಾರದ ವಿರುದ್ಧ ರೋಷಭರಿತವಾದ ಮಾತುಗಳು ಮತ್ತು ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಉದ್ರೇಕಕಾರಿ ಸಾಮಗ್ರಿ ಮುದ್ರಿತವಾಗಿತ್ತು ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net