

ಜೈಪುರ: ಮೊನ್ನೆಮೊನ್ನೆಯಷ್ಟೇ ಐಪಿಎಸ್ ಅಧಿಕಾರಿ ಡಾ.ಡಿ. ರೂಪಾ ಟ್ವೀಟ್ ವೈರಲ್ ಆಗಿತ್ತು. ನಟಿ ಕಂಗನಾ ಹಾಗೂ ಅವರ ಮಧ್ಯೆ ಟ್ವಿಟರ್ನಲ್ಲಿ ವಾಗ್ವಾದ ನಡೆದಿತ್ತು. ಇದೀಗ ಮತ್ತೊಬ್ಬ ಐಪಿಎಸ್ ಅಧಿಕಾರಿ ಟ್ವೀಟ್ ಕೂಡ ವೈರಲ್ ಆಗಿದ್ದು, ಪೊಲೀಸ್ ಇಲಾಖೆಯೇ ಹುಬ್ಬೇರಿಸುವಂತೆ ಮಾಡಿದೆ.
ಏಕೆಂದರೆ ಈ ಅಧಿಕಾರಿ 'ಥ್ಯಾಂಕ್ಲೆಸ್ ಜಾಬ್' ಎಂದು ಟ್ವೀಟ್ ಮಾಡಿದ್ದಾರೆ. 'ನೀನು ಥ್ಯಾಂಕ್ಲೆಸ್ ಕೆಲಸವನ್ನು ಆರಿಸಿಕೊಂಡಿದ್ದಿ. ಯಾರೂ ಥ್ಯಾಂಕ್ಸ್ ಹೇಳದಾಗ ಅಪ್ಸೆಟ್ ಆಗಬಾರದು. ಚಪ್ಪಾಳೆ ಹಾಗೂ ಮೆಚ್ಚುಗೆಯನ್ನು ಬೆನ್ನತ್ತಬೇಡ..' ಎಂಬುದಾಗಿ ಅವರು ಟ್ವೀಟ್ ಮಾಡಿಕೊಂಡಿದ್ದಾರೆ. ಅವರ ಈ ಟ್ವೀಟ್ ವೈರಲ್ ಆಗಿದ್ದು, ಎರಡೇ ದಿನಗಳಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.
ಅಂದಹಾಗೆ ಇಂಥದ್ದೊಂದು ಟ್ವೀಟ್ ಮಾಡಿ ಗಮನ ಸೆಳೆದಿರುವ ಐಪಿಎಸ್ ಅಧಿಕಾರಿಯ ಹೆಸರು ಗೌರವ್ ಯಾದವ್. ಇತ್ತೀಚೆಗೆ ಇವರನ್ನು ಎತ್ತಂಗಡಿ ಮಾಡಿದ ಹಿನ್ನೆಲೆಯಲ್ಲಿ ಹೀಗೆ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದ್ದರೂ ಸ್ವತಃ ಅಧಿಕಾರಿಯೇ ಅದನ್ನು ನಿರಾಕರಿಸಿದ್ದಾರೆ.
ರಾಜಸ್ಥಾನದ ಕೋಟಾದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಆಗಿತ್ತು. ಅದೇ ಕಾರಣಕ್ಕೆ ಅಲ್ಲಿನ ಎಸ್ಪಿ ಆಗಿದ್ದ ಗೌರವ್ ಯಾದವ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ನಾನು ಲೋಕಾಭಿರಾಮವಾಗಿ ಆ ಟ್ವೀಟ್ ಮಾಡಿದ್ದು, ಅದಕ್ಕೂ ಇತ್ತೀಚಿನ ಬೆಳವಣಿಗೆಗೂ ಯಾವುದೇ ಸಂಬಂಧವಿಲ್ಲ. ಅಷ್ಟಕ್ಕೂ ನಾನು ಅದನ್ನು ಗೆಳೆಯರೊಬ್ಬರ ವಾಲ್ನಿಂದ ಕಾಪಿ ಮಾಡಿದ್ದಾಗಿಯೂ ಸ್ಪಷ್ಟನೆ ನೀಡಿದ್ದಾರೆ. ಗೌರವ್ ಯಾದವ್ ಸದ್ಯ ಜೈಪುರದ ಸಿಐಡಿ ಕ್ರೈಂ ಬ್ರ್ಯಾಂಚ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. (ಏಜೆನ್ಸೀಸ್)