ಮುಂಬೈ ಇಂಡಿಯನ್ಸ್ ಮಾಸ್ಟರ್‌ಸ್ಟ್ರೋಕ್: ಆರ್​​ಸಿಬಿ ಮಾಜಿ ಆಟಗಾರನಿಗೆ ಕೋಚಿಂಗ್​​​​​ ಜವಾಬ್ದಾರಿ! | Mumbai Indians Coaching Staff

ಮುಂಬೈ ಇಂಡಿಯನ್ಸ್ ಮಾಸ್ಟರ್‌ಸ್ಟ್ರೋಕ್: ಆರ್​​ಸಿಬಿ ಮಾಜಿ ಆಟಗಾರನಿಗೆ ಕೋಚಿಂಗ್​​​​​ ಜವಾಬ್ದಾರಿ! | Mumbai Indians Coaching Staff
Published on: 

Mumbai Indians: ಮುಂಬರುವ 2027ರ ಐಪಿಎಲ್ ಸೀಸನ್‌ಗಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತನ್ನ ಕೋಚಿಂಗ್ ಬಳಗದಲ್ಲಿ ಭರ್ಜರಿ ಬದಲಾವಣೆ ಮಾಡಿದ್ದು, ಕನ್ನಡಿಗ ರಾಬಿನ್ ಉತ್ತಪ್ಪ ಅವರನ್ನು ತಂಡದ ಹೊಸ ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಿದೆ. ಕೀರನ್ ಪೊಲಾರ್ಡ್ ಅವರನ್ನು ಮುಖ್ಯ ಕೋಚ್ ಆಗಿ ಬಡ್ತಿ ನೀಡಿ ನೇಮಿಸಿದ ಬಳಿಕ ತೆರವಾಗಿದ್ದ ಬ್ಯಾಟಿಂಗ್ ಕೋಚ್ ಸ್ಥಾನಕ್ಕೆ ಉತ್ತಪ್ಪರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಮುಂಬೈ ಇಂಡಿಯನ್ಸ್‌ನ ಹೊಸ ಸಿಬ್ಬಂದಿಗಳ ನೇಮಕ ಅಧಿಕೃತವಾಗಿ ಪೂರ್ಣಗೊಂಡಿದೆ.

ರಾಬಿನ್ ಉತ್ತಪ್ಪ ಅವರು ಐಪಿಎಲ್ ಟೂರ್ನಿಯ ಉದ್ಘಾಟನಾ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಆ ಸಂದರ್ಭದಲ್ಲಿ ಅವರು 14 ಪಂದ್ಯಗಳಲ್ಲಿ ಒಟ್ಟು 320 ರನ್ ಗಳಿಸಿದ್ದರು. ಉತ್ತಪ್ಪ ಅವರಲ್ಲದೆ, ನ್ಯೂಜಿಲೆಂಡ್‌ ನ ಮಾಜಿ ವೇಗಿ ಮಿಚೆಲ್ ಮೆಕ್ಲೆನಗನ್ ಬೌಲಿಂಗ್ ಕೋಚ್ ಆಗಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಟಿ. ದಿಲೀಪ್ ಅವರು ಫೀಲ್ಡಿಂಗ್ ವಿಭಾಗದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದು, ದೇಶೀಯ ಕ್ರಿಕೆಟ್‌ನ ದಿಗ್ಗಜ ಧವಳ್ ಕುಲಕರ್ಣಿ ಅವರು ಡೆವಲಪ್‌ಮೆಂಟ್ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಮಹೇಲಾ ಜಯವರ್ಧನೆ ಅವರು ಮುಖ್ಯ ಕೋಚ್ ಸ್ಥಾನದಿಂದ ಕೆಳಗಳಿದ ನಂತರ ಕೀರನ್ ಪೊಲಾರ್ಡ್ ಆ ಸ್ಥಾನವನ್ನು ಅಲಂಕರಿಸಿದ್ದಾರೆ.

ಉತ್ತಪ್ಪ ಅವರಂತೆ, ಮೆಕ್ಲೆನಗನ್ ಮತ್ತು ಧವಳ್ ಕುಲಕರ್ಣಿ ಕೂಡ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಹೊಸಬರಲ್ಲ. ಅವರು ತಮ್ಮ ಆಟಗಾರರ ದಿನಗಳಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ ಅನುಭವ ಹೊಂದಿದ್ದಾರೆ.

Also Read
ಇನ್ಮುಂದೆ ವಾಂಖೆಡೆಯಲ್ಲಿ ಕೆಂಪು, ಹಳದಿ ಕಾಣಬಾರ್ದು...ಮುಂಬೈ ಇಂಡಿಯನ್ಸ್ ನೂತನ ಹೆಡ್ ಕೋಚ್ ಪೊಲಾರ್ಡ್ ಶಾಕಿಂಗ್‌ ಹೇಳಿಕೆ! | Kieron Pollard
ಮುಂಬೈ ಇಂಡಿಯನ್ಸ್ ಮಾಸ್ಟರ್‌ಸ್ಟ್ರೋಕ್: ಆರ್​​ಸಿಬಿ ಮಾಜಿ ಆಟಗಾರನಿಗೆ ಕೋಚಿಂಗ್​​​​​ ಜವಾಬ್ದಾರಿ! | Mumbai Indians Coaching Staff

ಹೊಸ ಕೋಚ್‌ಗಳ ಹಿನ್ನೆಲೆ!

2007ರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದ ರಾಬಿನ್ ಉತ್ತಪ್ಪ, ಟಿ20 ಕ್ರಿಕೆಟ್‌ನ ಆರಂಭಿಕ ದಿನಗಳಲ್ಲಿ ಎಂಐ, ಚೆನ್ನೈ ಸೂಪರ್ ಕಿಂಗ್ಸ್, ಪುಣೆ ವಾರಿಯರ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದಾರೆ. ಮಿಚೆಲ್ ಮೆಕ್ಲೆನಗನ್ ಅವರು 2015ರಿಂದ 2020ರ ನಡುವೆ ಮುಂಬೈ ಇಂಡಿಯನ್ಸ್ ಪರ ಆಡಿ, 2015, 2017, 2019 ಮತ್ತು 2020ರ ಪ್ರಶಸ್ತಿ ಜಯಿಸಿದ ಸೀಸನ್‌ಗಳಲ್ಲಿ ಪ್ರಮುಖ ಪಾತ್ರವಹಿಸಿ ನಾಲ್ಕು ಬಾರಿ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇನ್ನು ಧವಳ್ ಕುಲಕರ್ಣಿ ಮುಂಬೈ ಪರ 2 ಬಾರಿ (2013 ಮತ್ತು 2020) ಐಪಿಎಲ್ ಜಯಿಸಿದ್ದಾರೆ. ಎಂಐ ಜೊತೆ ಬಲವಾದ ಅನುಭವ ಹೊಂದಿರುವ ಅವರು, ಯುವ ಭಾರತೀಯ ಬೌಲರ್‌ಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಫ್ರಾಂಚೈಸಿ ತಿಳಿಸಿದೆ.

ಮುಂಬೈ ಇಂಡಿಯನ್ಸ್‌ನ ಸವಾಲುಗಳು!..ಉತ್ತಪ್ಪ ಹೇಳಿದ್ದೇನು..?

ಕಳೆದ ಆರು ವರ್ಷಗಳಿಂದ ಮುಂಬೈ ಇಂಡಿಯನ್ಸ್ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. 2024ರ ಸೀಸನ್‌ನಲ್ಲಿ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. 2025ರಲ್ಲಿ ಕ್ವಾಲಿಫೈಯರ್ 2 ತಲುಪಿದರೂ, 2026ರ ಆವೃತ್ತಿಯಲ್ಲಿ ತಂಡವು ಮತ್ತೊಮ್ಮೆ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದು ಅಭಿಯಾನ ಮುಗಿಸಿತ್ತು.

ತಮ್ಮ ಆಯ್ಕೆಯ ಬಳಿಕ ಮಾತನಾಡಿರುವ ರಾಬಿನ್​ ಉತ್ತಪ್ಪ, ನಾವು ಮತ್ತೆ ಅಂಡರ್‌ಡಾಗ್ಸ್ ಸ್ಥಾನದಲ್ಲಿದ್ದೇವೆ. ಅಭಿಮಾನಿಗಳ ನಂಬಿಕೆಯನ್ನು ಮರಳಿ ಗಳಿಸಬೇಕಿದೆ ಎಂದಿದ್ದಾರೆ. ಕೇವಲ ತವರಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮಾತ್ರವಲ್ಲದೆ, ಹೊರಗಿನ ಮೈದಾನಗಳಲ್ಲೂ ಎದುರಾಳಿಗಳಲ್ಲಿ ಅದೇ ರೀತಿಯ ನಡುಕ ಹುಟ್ಟಿಸುವಂತೆ ತಂಡವನ್ನು ಸಜ್ಜುಗೊಳಿಸುವುದು ತನ್ನ ಗುರಿ ಎಂದು ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ. ಅಭಿಮಾನಿಗಳ ವಿಶ್ವಾಸವನ್ನು ಮರಳಿ ಗಳಿಸಿ, ಈ ಬಾರಿಯ ಪಯಣವನ್ನು ಸ್ಮರಣೀಯವಾಗಿಸುವುದು ತಂಡದ ಮುಖ್ಯ ಗುರಿಯಾಗಿದೆ.

ಐಪಿಎಲ್‌ನ ಆರಂಭಿಕ ದಿನಗಳನ್ನು ಸ್ಮರಿಸಿರುವ ಉತ್ತಪ್ಪ, 2008ರಲ್ಲಿ ಆಸ್ಟ್ರೇಲಿಯಾದಲ್ಲಿ ಹರಾಜು ನಡೆದಾಗ ತನ್ನ ಕ್ರಿಕೆಟ್ ಹೀರೋ ಸಚಿನ್ ತೆಂಡೂಲ್ಕರ್ ಜೊತೆ ಆಡುವ ಅವಕಾಶ ಸಿಕ್ಕಿದ್ದು ಅತ್ಯಂತ ರೋಮಾಂಚನಕಾರಿ ಅನುಭವವಾಗಿತ್ತು ಎಂದಿದ್ದಾರೆ. ಆ ಆರಂಭಿಕ ಸೀಸನ್‌ನಲ್ಲಿ ಸಚಿನ್ ಗಾಯದ ಸಮಸ್ಯೆಯಿಂದ ಹೊರಗುಳಿದಾಗ ಹರ್ಭಜನ್ ಸಿಂಗ್ ನಾಯಕತ್ವ ವಹಿಸಿದ್ದರು ಹಾಗೂ ಸನತ್ ಜಯಸೂರ್ಯ ಮತ್ತು ಶಾನ್ ಪೊಲಾಕ್ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ(ಏಜೆನ್ಸೀಸ್​).