ಐಪಿಎಲ್ ಯಾಕೆ ಸ್ಪೆಷಲ್? ಕೊಹ್ಲಿ ಕೊಡ್ತಾರೆ ಕಾರಣ

kohli_WEB
Published on

ಬೆಂಗಳೂರು: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಯಾದ ಐಪಿಎಲ್ ಹಲವು ಭಿನ್ನ ಕಾರಣಗಳಿಂದಾಗಿ ಇಷ್ಟವಾಗುತ್ತದೆ. ಇದರಲ್ಲಿ ಲಭಿಸುವ ಹಣಕ್ಕಾಗಿ ಹಲವು ಕ್ರಿಕೆಟಿಗರಿಗೆ ಇದು ನೆಚ್ಚಿನ ಟೂರ್ನಿಯಾಗಿದ್ದರೆ, ಇದರಲ್ಲಿ ಸಿಡಿಯುವ ಭರ್ಜರಿ ಬೌಂಡರಿ-ಸಿಕ್ಸರ್‌ಗಳಿಗಾಗಿ ಕ್ರಿಕೆಟ್ ಪ್ರೇಮಿಗಳ ಮನಗೆಲ್ಲುತ್ತದೆ. ಆದರೆ ಟೀಮ್ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಕಾರಣಗಳು ಇದಕ್ಕಿಂತ ಸಾಕಷ್ಟು ಭಿನ್ನವಾಗಿವೆ. ಒಂದಲ್ಲ, ಎರಡಲ್ಲ, ಹಲವಾರು ಕಾರಣಗಳು ಅವರ ಬಳಿ ಇವೆ.

ಐಪಿಎಲ್ ತಂಡದಲ್ಲಿ ಭಿನ್ನ ರಾಜ್ಯ, ದೇಶಗಳಿಂದ ಬಂದು ಒಗ್ಗೂಡುವ ಆಟಗಾರರ ನಡುವೆ ಬೆಳೆಯುವ ಪ್ರೀತಿ, ವಿಶ್ವಾಸ, ಗೆಳೆತನ, ಸಲಿಗೆಗಳಿಗಾಗಿ ಕೊಹ್ಲಿಗೆ ಇದು ಬಹಳ ವಿಶೇಷವಾದ ಟೂರ್ನಿಯಾಗಿದೆಯಂತೆ. ‘ನಾವು ದ್ವಿಪಕ್ಷೀಯ ಸರಣಿಗಳ ವೇಳೆ ಹೆಚ್ಚಿನ ಸಮಯ ಒಂದೇ ತಂಡದ ವಿರುದ್ಧ ಆಡುತ್ತಿರುತ್ತೇವೆ. ಐಸಿಸಿ ಟೂರ್ನಿಗಳ ನಡುವೆ ಸುದೀರ್ಘ ಅಂತರವಿರುತ್ತವೆ. ಐಸಿಸಿ ಟೂರ್ನಿಗಳಲ್ಲೂ ನಾವು ಬೇರೆ ತಂಡದ ಆಟಗಾರರೊಂದಿಗೆ ಹೆಚ್ಚು ಬೆರೆಯುವುದಿಲ್ಲ ಅಥವಾ ಕೆಲವು ತಂಡಗಳು ಅಪರೂಪಕ್ಕೊಮ್ಮೆ ಎದುರಾಗುತ್ತವೆ. ಆದರೆ ಐಪಿಎಲ್‌ನಲ್ಲಿ ನಮಗೆ ಪ್ರತಿ 2-3 ದಿನಗಳಿಗೊಮ್ಮೆ ಹೊಸ ತಂಡದ ಸವಾಲು ಎದುರಾಗುತ್ತದೆ. ಇದೇ ಐಪಿಎಲ್‌ನ ವಿಶೇಷತೆ. ಪ್ರತಿ ಪಂದ್ಯದಲ್ಲಿ ಆಡುವಾಗಲೂ ನಮಗೆ ವಿಭಿನ್ನವಾದ ವಾತಾವರಣ ಸಿಗುತ್ತದೆ’ ಎಂದು ಕೊಹ್ಲಿ ವಿವರಿಸಿದ್ದಾರೆ.

ಪ್ರಶಸ್ತಿ ಗೆಲ್ಲದಿದ್ದರೂ ಆರ್‌ಸಿಬಿ ವಿಶೇಷ

ಆರ್‌ಸಿಬಿ ತಂಡ ಐಪಿಎಲ್‌ನಲ್ಲಿ ಹೆಚ್ಚಿನ ಯಶಸ್ಸು ಗಳಿಸಿಲ್ಲ. 12 ಆವೃತ್ತಿಗಳಲ್ಲಿ ಆಡಿದ್ದರೂ, ಒಮ್ಮೆಯೂ ಪ್ರಶಸ್ತಿ ಜಯಿಸಿಲ್ಲ. ಆದರೆ ಎಬಿ ಡಿವಿಲಿಯರ್ಸ್‌, ಕ್ರಿಸ್ ಗೇಲ್‌ರಂಥ ಸ್ಟಾರ್ ಕ್ರಿಕೆಟಿಗರ ಜತೆಗೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿರುವುದು ಕೊಹ್ಲಿಗೆ ಖುಷಿ ತಂದಿದೆ. ‘ಐಪಿಎಲ್ ್ರಾಂಚೈಸಿಗಳು ಅಭಿಮಾನಿಗಳ ಜತೆಗೆ ಬೆಳೆಸಿಕೊಳ್ಳುವ ಬಾಂಧವ್ಯವೂ ಟೂರ್ನಿಯನ್ನು ವಿಶೇಷವಾಗಿಸುತ್ತದೆ. ಹಲವು ಹೊಸ ಆಟಗಾರರೊಂದಿಗೆ ನಾವು ಆಡಬೇಕಾಗುತ್ತದೆ. ಕೆಲ ವಿದೇಶಿ ಆಟಗಾರರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವ ಅವಕಾಶ ಯಾವಾಗಲೂ ಸಿಗುವುದಿಲ್ಲ’ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net