

ಕಿಂಗ್ಸ್ಟನ್: ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟಿ20 ಟೂರ್ನಿಯ ತಂಡದಿಂದ ವರ್ಗಾವಣೆ ವಿಚಾರದಲ್ಲಿ ಮಾಜಿ ಸಹ-ಆಟಗಾರ ರಾಮ್ರೇಶ್ ಸರ್ವಾನ್ ಮೇಲೆ ವಾಗ್ದಾಳಿ ನಡೆಸಿದ್ದ ಸ್ಪೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ಗೆ ಶಿಕ್ಷೆಯನ್ನು ವಿಧಿಸಲು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ (ಸಿಡಬ್ಲ್ಯುಐ) ಮುಂದಾಗಿದೆ. ಒಂದು ವೇಳೆ ನಿಷೇಧಕ್ಕೆ ಒಳಗಾದರೆ ಗೇಲ್ ವೃತ್ತಿಜೀವನವೇ ಕೊನೆಗೊಳ್ಳುವ ಭೀತಿಯೂ ಎದುರಾಗಿದೆ.
40 ವರ್ಷದ ಗೇಲ್ ಈ ವರ್ಷದ ಸಿಪಿಎಲ್ಗೆ ಸೇಂಟ್ ಲೂಸಿಯಾ ಜೌಕ್ಸ್ ತಂಡವನ್ನು ಕೂಡಿ ಕೊಂಡಿದ್ದಾರೆ. ಈ ಹಿಂದಿನ ಜಮೈಕಾ ಟಲ್ಲವಾಹ್ಸ್ ನಿಂದ ಹೊರಬೀಳಲು ತಂಡದ ಸಹಾಯಕ ಕೋಚ್ ರಾಮ್ರೇಶ್ ಸರ್ವಾನ್ ಕುತಂತ್ರ ಕಾರಣ ಎಂದು ದೂರಿದ್ದ ಗೇಲ್, ‘ಕರೊನಾ ವೈರಸ್ಗಿಂತಲೂ ಸರ್ವಾನ್ ಕೆಟ್ಟವ’ ಎಂದು ಜರಿದಿದ್ದರು. ಆದರೆ, ಗೇಲ್ರನ್ನು ವಾಣಿಜ್ಯ ಕಾರಣಕ್ಕಾಗಿ ಮಾತ್ರ ಕೈಬಿಡಲಾಗಿದೆ ಎಂದು ಜಮೈಕಾ ತಂಡದ ಮ್ಯಾನೇಜ್ವೆುಂಟ್ ಸ್ಪಷ್ಟಪಡಿಸಿತ್ತು.
‘ಗೇಲ್ ಸಾರ್ವಜನಿಕವಾಗಿ ನೀಡಿರುವ ಹೇಳಿಕೆಗಳಿಂದ ಸಿಪಿಎಲ್ಗೆ ಕೆಟ್ಟ ಹೆಸರು ತಂದಂತಾಗಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ಗೂ ಇದು ಉತ್ತಮ ಬೆಳವಣಿಗೆ ಅಲ್ಲ. ಸಿಪಿಎಲ್ ನೀತಿಸಂಹಿತೆಯ ಅನ್ವಯ ಆಟಗಾರರು ಟೂರ್ನಿಗೆ ಅಪಕೀರ್ತಿ ತಂದರೆ ಶಿಕ್ಷೆಗೆ ಅರ್ಹರು’ ಎಂದು ಸಿಡಬ್ಲ್ಯುಐ ಮುಖ್ಯಸ್ಥ ರಿಕಿ ಸ್ಕೆರಿಟ್ ಹೇಳಿದ್ದಾರೆ. 1990ರ ದಶಕದಲ್ಲಿ ಗೇಲ್-ಸರ್ವಾನ್ ಇಬ್ಬರೂ ಜತೆಜತೆಯಲ್ಲೇ ವೃತ್ತಿಜೀವನ ಆರಂಭಿಸಿದ್ದರು. ಆದರೆ ಈಗ ಸ್ನೇಹ ಉಳಿದಿಲ್ಲ ಎಂದೂ ಗೇಲ್ ಹೇಳಿದ್ದರು.