VIDEOS: ಐಪಿಎಲ್​ ಆಟಗಾರರ ಫಿಟ್ನೆಸ್​ ವರ್ಕ್​ಔಟ್​ ಹೇಗಿದೆ ಗೊತ್ತಾ..?

IPL PLAYERS FITNESS
Published on

ಬೆಂಗಳೂರು: ಕರೊನಾ ವೈರಸ್​ ಭೀತಿಯಿಂದಾಗಿ ಮುಂದೂಡಲ್ಪಟ್ಟಿರುವ 13ನೇ ಆವೃತ್ತಿಯ ಐಪಿಎಲ್​ ಆರಂಭಕ್ಕೆ ಕೇವಲ ದಿನಗಳು ಬಾಕಿ ಉಳಿದಿವೆ. ಕಳೆದ ವಾರಾಂತ್ಯದಲ್ಲಿ ಎಲ್ಲ 8 ತಂಡಗಳು ಯುಎಇ ತಲುಪಿವೆ. ಹಾಲಿ ಚಾಂಪಿಯನ್ಸ್​ ಮುಂಬೈ ಇಂಡಿಯನ್ಸ್​, ಕೆಕೆಆರ್​ ಅಬುಧಾಬಿಯಲ್ಲಿ ಉಳಿದುಕೊಂಡಿದ್ದರೆ, ಉಳಿದ ತಂಡಗಳು ದುಬೈನಲ್ಲೇ 7-ಸ್ಟಾರ್​ ಹೋಟೆಲ್​ಗಳಲ್ಲಿ ಉಳಿದುಕೊಂಡಿವೆ. ಸ್ಥಳೀಯ ಶಿಷ್ಟಾಚಾರದಂತೆ ಆ.29ರವರೆಗೂ ತಂಡಗಳು ಕಡ್ಡಾಯ ಕ್ವಾರಂಟೈನ್​ನಲ್ಲಿರಬೇಕಿದೆ. ಈ ಅವಧಿಯಲ್ಲಿ ಆಟಗಾರರು ಮಾತ್ರ ತಮ್ಮ ದೈನಂದಿನ ಫಿಟ್ನೆಸ್​ ಕಸರತ್ತು ಮುಂದುವರಿಸಿದ್ದಾರೆ. ಅಲ್ಲದೆ, ಅಲ್ಲಿನ ಪ್ರಕೃತಿಯ ಸೊಬಗಿಗೂ ಮನ ಸೋತಿದ್ದಾರೆ.

ದುಬೈ ಬೀಚ್​ ತಟದಲ್ಲಿರುವ ಹೋಟೆಲ್​ಗಳಲ್ಲಿ ತಂಗಿರುವ ತಂಡಗಳು, ಹೊರಾಂಗಣ ಹಾಗೂ ಕೊಠಡಿಯಲ್ಲೇ ಫಿಟ್ನೆಸ್​ ಕಸರತ್ತು ಆರಂಭಿಸಿದ್ದಾರೆ. ಕೊಠಡಿಯಲ್ಲೇ ಜಿಮ್​ ಪರಿಕರಗಳನ್ನು ಹೊಂದಿರುವ ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಳ್ಳುತ್ತಿದ್ದಾರೆ. ಪಂಜಾಬ್​ ತಂಡದಲ್ಲಿರುವ ಕರ್ನಾಟಕದ ಮಯಾಂಕ್​ ಅಗರ್ವಾಲ್​, ಸಿಎಸ್​ಕೆ ಆಲ್ರೌಂಡರ್​ ರವೀಂದ್ರ ಜಡೇಜಾ, ಸುರೇಶ್​ ರೈನಾ, ರಾಜಸ್ಥಾನ ರಾಯಲ್ಸ್​ ತಂಡದಲ್ಲಿರುವ ಶ್ರೇಯಸ್​ ಗೋಪಾಲ್​, ರಾಬಿನ್​ ಉತ್ತಪ್ಪ ಸೇರಿದಂತೆ ಇತರ ಆಟಗಾರರು ಫಿಟ್ನೆಸ್​ಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಟೀಮ್​ನ ಅಧಿಕೃತ ಇನ್​ಸ್ಟಾಗ್ರಾಂನಲ್ಲಿ ಆಟಗಾರರ ಫಿಟ್ನೆಸ್​ ಕಸರತ್ತಿನ ಚಿತ್ರಗಳನ್ನು ಪ್ರಕಟಿಸಲಾಗಿದೆ.

ಸೆ.19 ರಿಂದ ನವೆಂಬರ್​ 10ರವರೆಗೆ 13ನೇ ಐಪಿಎಲ್​ ನಡೆಯಲಿದ್ದು, ಟೂರ್ನಿಯ ಅಂತಿಮ ವೇಳಾಪಟ್ಟಿ ಇನ್ನಷ್ಟೇ ಪ್ರಕಟಿಸಬೇಕಿದೆ. ಯುಎಇಯ ಮೂರು ನಗರಗಳಾದ ದುಬೈ, ಶಾರ್ಜಾ ಹಾಗೂ ಅಬುಧಾಬಿಯಲ್ಲಿ 53 ದಿನಗಳ ಕಾಲ 60 ಪಂದ್ಯಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net