

IPL Mega Auction: ಟೀಮ್ ಇಂಡಿಯಾ ಸ್ಟಾರ್ ಆಟಗಾರ ರಿಷಭ್ ಪಂತ್ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಮಾಡಿರುವ ಕಾಮೆಂಟ್ ವೈರಲ್ ಆಗಿದೆ. ಈ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಐಪಿಎಲ್ ಹರಾಜಿಗೆ ಬಂದರೆ ಎಲ್ಲ ದಾಖಲೆಗಳು ಮುರಿಯುತ್ತವೆ ಎಂದು ಹೇಳಿದ್ದಾರೆ. ಎಲ್ಲ ಫ್ರಾಂಚೈಸಿಗಳು ಪಂತ್ ಕಡೆಗೆ ನೋಡುತ್ತಿವೆ. ಈ ಬಾರಿ ಅವರಿಗೆ 25 ರಿಂದ 30 ಕೋಟಿ ರೂ. ಬೆಲೆ ಬಂದರೂ ಆಶ್ಚರ್ಯವಿಲ್ಲ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಐಪಿಎಲ್-2025 ಮೆಗಾ ಹರಾಜಿನ ಸಮಯ ಸಮೀಪಿಸುತ್ತಿದೆ. ನವೆಂಬರ್ ಕೊನೆಯ ವಾರದಲ್ಲಿ ಹರಾಜು ನಡೆಸಲು ಬಿಸಿಸಿಐ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಅಕ್ಟೋಬರ್ 31 ಅಂದರೆ ಇಂದು ಸಂಜೆಯೊಳಗೆ ಹತ್ತು ಫ್ರಾಂಚೈಸಿಗಳು ತಮ್ಮ ರಿಟೇನ್ ಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿ ಮುಂದೆ ಸಲ್ಲಿಸಬೇಕಿದೆ. ಈ ಹಿನ್ನೆಲೆಯಲ್ಲಿ ಆಕಾಶ್ ಚೋಪ್ರಾ ರಿಷಭ್ ಪಂತ್ ಬಗ್ಗೆ ಮಾತನಾಡಿದ್ದಾರೆ. ಒಂದು ವೇಳೆ ರಿಷಭ್, ಹರಾಜಿಗೆ ಬಂದರೆ ಫ್ರಾಂಚೈಸಿಗಳು ಅವರ ಮೇಲೆ ಕಣ್ಣಿಡುವುದು ಖಚಿತ ಎಂದಿದ್ದಾರೆ. ಅಲ್ಲದೆ, ಅದಕ್ಕೆ ಕಾರಣಗಳನ್ನೂ ವಿಶ್ಲೇಷಿಸಿದ್ದಾರೆ.
ರಿಷಭ್ ಪಂತ್ ಹರಾಜಿಗೆ ಬರುತ್ತಾರೆ ಎಂಬ ಸುದ್ದಿ ಜೋರಾಗಿದೆ. ಅವರೊಬ್ಬ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್. ಆದರೆ, ಅವರ ಟಿ-20 ಅಂಕಿ-ಅಂಶಗಳು ಅಷ್ಟೊಂದು ಚೆನ್ನಾಗಿಲ್ಲ ಎಂದು ಹಲವರು ಹೇಳುತ್ತಾರೆ. ಇದುವರೆಗೆ ಐಪಿಎಲ್ನಲ್ಲಿ ರಿಷಭ್ ಉತ್ತಮವಾಗಿ ರನ್ ಗಳಿಸಿಲ್ಲ ಎಂಬುದು ನಿಜ. ಆದರೆ, ಹರಾಜಿಗೆ ಬಂದರೆ ದಾಖಲೆಗಳು ಮುರಿಯುವುದು ಖಚಿತ. ಆರ್ಸಿಬಿ ತಂಡಕ್ಕೆ ಕೀಪರ್, ಬ್ಯಾಟ್ಸ್ಮನ್ ಮತ್ತು ನಾಯಕನೂ ಬೇಕು. ಪಂಜಾಬ್ ಕೂಡ ವಿಕೆಟ್ ಕೀಪರ್ ಹೊಂದಿಲ್ಲ. ಅಲ್ಲದೆ, ದೆಹಲಿಗೂ ಪಂತ್ ಬೇಕು. ಕೆಕೆಆರ್ಗೂ ಅವನ ಅಗತ್ಯವಿದೆ. ಪಂತ್ ಅವರಂತಹ ವಿಕೆಟ್ ಕೀಪರ್ ಸಿಎಸ್ಕೆಗೂ ಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ.
ಇನ್ನು ಇಶಾನ್ ಕಿಶನ್ ತಂಡದಲ್ಲಿ ಇಲ್ಲದಿದ್ದರೆ ಮುಂಬೈಗೂ ಪಂತ್ ಬೇಕು. ನಿಕೋಲಸ್ ಪೂರನ್ ಇಲ್ಲದಿದ್ದರೆ, ಲಖನೌ ಕೂಡ ಪಂತ್ ಬಗ್ಗೆ ಆಸಕ್ತಿ ಹೊಂದಿರಬಹುದು. ಗುಜರಾತ್ ತಂಡದ ಸ್ಥಿತಿಯೂ ಇದೇ ಆಗಿದೆ. ಅವರ ಬಳಿಯೂ ವಿಕೆಟ್ ಕೀಪರ್ ಇಲ್ಲ. ಹಾಗಾಗಿ ರಿಷಭ್ ಪಂತ್ ಹರಾಜಿಗೆ ಬಂದರೆ 25 ರಿಂದ 30 ಕೋಟಿ ರೂ.ಗೆ ಬಿಕರಿಯಾಗಲಿದ್ದಾರೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಅಂದಹಾಗೆ ಮಾರಣಾಂತಿಕ ರಸ್ತೆ ಅಪಘಾತದಲ್ಲಿ ಅದೃಷ್ಟವಶಾತ್ ಬದುಕುಳಿದ ರಿಷಭ್ ಪಂತ್, ಸುಮಾರು ಒಂದೂವರೆ ವರ್ಷಗಳ ನಂತರ ಮತ್ತೆ ಕ್ರಿಕೆಟ್ ಪ್ರವೇಶಿಸಿದರು ಎಂಬುದು ಎಲ್ಲರಿಗೂ ತಿಳಿದಿದೆ. ಐಪಿಎಲ್-2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನ ನಾಯಕನಾಗಿ ಅಧಿಕಾರ ವಹಿಸಿಕೊಂಡ ಪಂತ್, ತಂಡವನ್ನು ಆರನೇ ಸ್ಥಾನಕ್ಕೆ ಮುನ್ನಡೆಸಿದರು. ನಾಯಕನಾಗಿ ಪ್ರಭಾವ ಬೀರದಿದ್ದರೂ ಬ್ಯಾಟ್ಸ್ಮನ್ ಆಗಿ 446 ರನ್ ಗಳಿಸಿ ಮಿಂಚಿದರು. ವಿಕೆಟ್ ಕೀಪರ್ ಆಗಿ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ಪೂರೈಸಿದರು. ಟಿ20 ವಿಶ್ವಕಪ್-2024 ರಲ್ಲಿ ಭಾರತವನ್ನು ಚಾಂಪಿಯನ್ ಮಾಡುವಲ್ಲಿ ಪಂತ್ ಅವರು ತಮ್ಮ ಪಾತ್ರವನ್ನು ನಿರ್ವಹಿಸಿದರು. (ಏಜೆನ್ಸೀಸ್)