ನವದೆಹಲಿ: ಐಪಿಎಲ್-2025 ಮೆಗಾ ಹರಾಜಿಗೆ ಬಿಸಿಸಿಐ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಆಟಗಾರ ರೀಟೇನ್ ಮತ್ತು ರಿಲೀಸ್ ಪಟ್ಟಿ ಬಿಡುಗಡೆಯಾಗಲಿದೆ. ಈ ಬಾರಿಯ ಐಪಿಎಲ್ ಹರಾಜು ಸಾಕಷ್ಟು ಬದಲಾವಣೆಗಳೊಂದಿಗೆ ಹೊಸತನದಿಂದ ಕೂಡಿರಲಿದೆ. ಘಟಾನುಘಟಿ ಆಟಗಾರರು ಕೂಡ ಹರಾಜು ಕಣಕ್ಕೆ ಇಳಿಯುವ ಸಾಧ್ಯತೆ. ಹೀಗಾಗಿ ಐಪಿಎಲ್ ಹರಾಜು ಇತಿಹಾಸದಲ್ಲಿ ಹೊಸ ದಾಖಲೆಗಳು ನಿರ್ಮಾಣವಾಗಲಿದೆ. ಈ ಬಾರಿ ಈ ಆಟಗಾರ ಏನಾದರೂ ಹರಾಜಿ ಬಂದರೆ ಐಪಿಎಲ್ ದಾಖಲೆಗಳು ಉಡೀಸ್ ಆಗಲಿದೆ ಎಂದು ಪಂಜಾಬ್ ಕಿಂಗ್ಸ್ ತಂಡದ ನಿರ್ದೇಶಕ ಸಂಜಯ್ ಬಂಗಾರ್ ಭವಿಷ್ಯ ನುಡಿದಿದ್ದಾರೆ.
ಸಂಜಯ್ ಬಂಗಾರ್ ಹೇಳಿದ ಆ ಆಟಗಾರ ಬೇರೆ ಯಾರೂ ಅಲ್ಲ, ಹಿಟ್‌ಮ್ಯಾನ್ ರೋಹಿತ್ ಶರ್ಮ. ತಮ್ಮ ನಾಯಕತ್ವದಡಿಯಲ್ಲಿ ರೋಹಿತ್, ಮುಂಬೈ ಇಂಡಿಯನ್ಸ್ ತಂಡಕ್ಕೆ ಐದು ಪ್ರಶಸ್ತಿಗಳನ್ನು ಗೆದ್ದುಕೊಟ್ಟಿದ್ದಾರೆ. ಆದರೆ, ಐಪಿಎಲ್ 2024 ಸೀಸನ್‌ನಲ್ಲಿ ಅವರನ್ನು ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿಸಲಾಯಿತು. ಕಳೆದ ವರ್ಷ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಹಿಟ್‌ಮ್ಯಾನ್ ಆಡಿದ್ದರು. ನಾಯಕತ್ವದಿಂದ ಕೆಳಗಿಳಿದಿದ್ದಕ್ಕೆ ಅತೃಪ್ತಿ ವ್ಯಕ್ತಪಡಿಸಿರುವ ರೋಹಿತ್, ಐಪಿಎಲ್ 2025ಕ್ಕೂ ಮುನ್ನ ಮತ್ತೊಂದು ಫ್ರಾಂಚೈಸಿಗೆ ತೆರಳಲಿದ್ದಾರೆ ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ರೋಹಿತ್ರನ್ನು ಖರೀದಿಸಲು ಸಜ್ಜಾಗಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಚರ್ಚೆಯಾಗುತ್ತಿದೆ. ಇದೀಗ ಮತ್ತೊಂದು ಸುದ್ದಿ ರೋಹಿತ್ ಕುರಿತು ಹರಿದಾಡುತ್ತಿದೆ. ಅದೇನೆಂದರೆ, ಮುಂಬರುವ ಮೆಗಾ ಹರಾಜಿನಲ್ಲಿ ರೋಹಿತ್ ಶರ್ಮ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ರೋಹಿತ್ರನ್ನು ನೀವು ಖರೀದಿ ಮಾಡುತ್ತೀರಾ ಎಂದು ಇತ್ತೀಚೆಗೆ ಪಾಡ್ಕಾಸ್ಟ್ನಲ್ಲಿ ಪಂಜಾಬ್ ಕಿಂಗ್ಸ್ ನಿರ್ದೇಶಕ ಸಂಜಯ್ ಬಂಗಾರ್ ಅವರನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ರೋಹಿತ್ ತುಂಬಾ ದುಬಾರಿ. ಅವರನ್ನು ಖರೀದಿಸಲು ನಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿದರು. ರೋಹಿತ್ ಮೆಗಾ ಹರಾಜಿಗೆ ಬಂದರೆ ಅತ್ಯಧಿಕ ಬೆಲೆಗೆ ಬಿಕರಿಯಾಗುವ ಮೂಲಕ ಎಲ್ಲ ದಾಖಲೆಗಳನ್ನು ಮುರಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆ ಸೃಷ್ಟಿಸಿರುವುದು ಗೊತ್ತೇ ಇದೆ. ಕಳೆದ ವರ್ಷದ ಮಿನಿ ಹರಾಜಿನಲ್ಲಿ ಕೆಕೆಆರ್ ಈ ಆಸ್ಟ್ರೇಲಿಯಾದ ಆಟಗಾರನನ್ನು ರೂ.24.75 ಕೋಟಿಗೆ ಪಡೆದುಕೊಂಡಿತ್ತು. ರೋಹಿತ್ ಹರಾಜಿಗೆ ಬಂದರೆ ಆ ಆ ದಾಖಲೆಯನ್ನು ಮುರಿಯಲಿದ್ದಾರೆ ಎಂದು ಸಂಜಯ್ ಬಂಗಾರ್ ಹೇಳಿದರು. (ಏಜೆನ್ಸೀಸ್)
ಬಾಂಗ್ಲಾ ವಿರುದ್ಧ ಪಾಕಿಸ್ತಾನದ ಹೀನಾಯ ಸೋಲಿಗೆ ಭಾರತವೇ ಕಾರಣ! ಪಾಕ್ ಮಾಜಿ ಕ್ರಿಕೆಟಿಗ ಅಚ್ಚರಿ ಹೇಳಿಕೆ
ಸರ್ಕಾರ ಧ್ವಂಸ ಮಾಡಿದ ನಟ ನಾಗಾರ್ಜುನ್ ಎನ್ ಕನ್ವೆನ್ಷನ್ ಕಟ್ಟಡದ 1 ದಿನದ ಬಾಡಿಗೆ ಇಷ್ಟೊಂದಿತ್ತಾ?