

ಬೆಂಗಳೂರು: ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಎಬಿ ಡಿವಿಲಿಯರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಹಾಲ್ ಆಫ್ ಫೇಮ್ನಲ್ಲಿ ಸೇರ್ಪಡೆಗೊಂಡಿದ್ದಕ್ಕೆ ಮತ್ತು ಜರ್ಸಿ ನಂಬರ್ ನಿವೃತ್ತಿಗೊಂಡ ಬೆನ್ನಲ್ಲೇ ಆರ್ಸಿಬಿ ತಂಡ ಹಾಗೂ ಅಭಿಮಾನಿಗಳ ಬಗ್ಗೆ ಭಾವನಾತ್ಮಕ ಪತ್ರವನ್ನು ಬರೆದಿದ್ದಾರೆ.
ಎಬಿಡಿ ತಮ್ಮ ಇನ್ಸ್ಟಾಗ್ರಾಂನ ಖಾತೆಯಲ್ಲಿ ಮೊನ್ನೆ ನಡೆದ ಆರ್ಸಿಬಿ ಅನ್ಬಾಕ್ಸ್ ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡು, ಭಾವನಾತ್ಮಕವಾಗಿ ಬರೆದುಕೊಂಡಿದ್ದು, ಅದರ ಸಾರಾಂಶ ಈ ಕೆಳಕಂಡಂತಿದೆ.
ಬೆಂಗಳೂರು ಹೆಮ್ಮೆಯ ನಗರ, ಅದ್ಭುತ ಫ್ರಾಂಚೈಸಿ ಮತ್ತು ಸೋಜಿಗದ ತಂಡದ ಪ್ರತಿನಿಧಿಗಳು. 2003 ರಿಂದ ಭಾರತದಲ್ಲಿ ಕಳೆದ ನನ್ನ ಎಲ್ಲ ದಿನಗಳ ಬಗ್ಗೆ ಯೋಚಿಸುತ್ತಿದ್ದಂತೆ ಅನೇಕ ವಿಶೇಷ ನೆನಪುಗಳು ಹಿಂದಕ್ಕೆ ಧಾವಿಸಿವೆ. ನಾನು ಈ ದೇಶ ಮತ್ತು ಇಲ್ಲಿನ ಜನರೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದೇನೆ ಮತ್ತು ನಾನು ಎಂದೆಂದಿಗೂ ಕೃತಜ್ಞರಾಗಿರುತ್ತೇನೆ. ತಂಡದ ಸಹ ಆಟಗಾರರಿಗೆ ಧನ್ಯವಾದಗಳು. ವಿಶೇಷವಾಗಿ ವಿರಾಟ್ ಕೊಹ್ಲಿಗೆ ಧನ್ಯವಾದಗಳು. ಥ್ಯಾಂಕ್ ಯು ಬೆಂಗಳೂರು ಎಂದು ಎಬಿಡಿ ಬರೆದುಕೊಂಡಿದ್ದಾರೆ.
ಅಂದಹಾಗೆ ಐಪಿಎಲ್ 16ನೇ ಆವೃತ್ತಿ ಮಾರ್ಚ್ 31ರಿಂದ ಆರಂಭವಾಗಲಿದೆ. ಮೊದಲ ದಿನವೇ ಗುಜರಾತ್ ಜೇಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ಗುಜರಾತಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಐಪಿಎಲ್ 16ನೇ ಆವೃತ್ತಿಯ ಅಧಿಕೃತ ಟೆಲಿವಿಷನ್ ಪ್ರಸಾರ ಹಕ್ಕನ್ನು ಸ್ಟಾರ್ಸ್ಪೋರ್ಟ್ಸ್ ವಾಹಿನಿ ಪಡೆದುಕೊಂಡಿದೆ. ಇಂಗ್ಲಿಷ್ ಹಾಗೂ ಹಿಂದಿ ಮಾತ್ರವಲ್ಲದೆ, ಕನ್ನಡ, ತೆಲುಗು, ಮರಾಠಿ, ಮಲಯಾಳಂ, ಗುಜರಾತಿ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಐಪಿಎಲ್ 16ನೇ ಆವೃತ್ತಿಯನ್ನು ಸ್ಟಾರ್ಸ್ಪೋರ್ಟ್ಸ್ ಪ್ರಸ್ತುತಪಡಿಸುತ್ತಿದೆ. (ಏಜೆನ್ಸೀಸ್)