ಇಂದಿನ ಐಪಿಎಲ್-14ರ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿಗೆ ಮುಂಬೈ ಸವಾಲು

RCB vs MI
Published on

ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳು ಐಪಿಎಲ್-14ರ ಉದ್ಘಾಟನಾ ಪಂದ್ಯದಲ್ಲಿ ಶುಕ್ರವಾರ ಎದುರಾಗಲಿವೆ. ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸೋಲುವ ಸಂಪ್ರದಾಯ ಉಳಿಸಿಕೊಂಡು ಬಂದಿರುವ ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಗೆಲುವಿನ ಆರಂಭ ಕಾಣುವ ಹಂಬಲದಲ್ಲಿದ್ದರೆ, ಹೊಸ ಆಟಗಾರರೊಂದಿಗೆ ಹೊಸ ಹುರುಪಿನಲ್ಲಿರುವ ಆರ್​ಸಿಬಿ ಕೂಡ ಶುಭಾರಂಭದ ನಿರೀಕ್ಷೆಯಲ್ಲಿದೆ.

ಕೋವಿಡ್-19 ಸೋಂಕಿಗೆ ಸಿಲುಕಿರುವ ಆರಂಭಿಕ ದೇವದತ್ ಪಡಿಕಲ್ ತಂಡಕ್ಕೆ ಲಭ್ಯರಾಗುವುದು ಅನುಮಾನ ಮೂಡಿಸಿದೆ. ಇದರೊಂದಿಗೆ ಆರಂಭದಲ್ಲೇ ಆರ್​ಸಿಬಿಗೆ ಕೊಂಚ ಹಿನ್ನಡೆಯಾದಂತಾಗಿದೆ. ಗ್ಲೆನ್ ಮ್ಯಾಕ್ಸ್​ವೆಲ್, ಕೈಲ್ ಜೇಮಿಸನ್​ರಂಥ ಬಲಾಢ್ಯರನ್ನು ದುಬಾರಿ ಮೊತ್ತಕ್ಕೆ ಖರೀದಿಸಿರುವ ಆರ್​ಸಿಬಿ ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಮುಂಬೈ ಇಂಡಿಯನ್ಸ್​ಗೆ ಸೋಲಿನ ರುಚಿ ತೋರಿಸಲು ಸಜ್ಜಾಗಿದೆ.

ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಮ್ಯಾಕ್ಸ್ ವೆಲ್ ಒಳಗೊಂಡ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಆರ್​ಸಿಬಿ ಮುಂಬೈ ಬೌಲರ್​ಗಳಿಗೆ ಸವಾಲಾಗಬಲ್ಲದು. ಯಜುವೇಂದ್ರ ಚಾಹಲ್-ವಾಷಿಂಗ್ಟನ್ ಸುಂದರ್ ಸ್ಪಿನ್ ಜೋಡಿ, ಮೊಹಮದ್ ಸಿರಾಜ್-ನವದೀಪ್ ಸೈನಿ ವೇಗದ ಜೋಡಿ ಮಿಂಚುವ ತವಕದಲ್ಲಿದೆ. ಮತ್ತೊಂದೆಡೆ, ಐದು ಬಾರಿ ಪ್ರಶಸ್ತಿ ಗೆದ್ದ ಹುಮ್ಮಸ್ಸಿನಲ್ಲಿರುವ ಮುಂಬೈ ಇಂಡಿಯನ್ಸ್ ಟೂರ್ನಿಯಲ್ಲಿ ಯಶಸ್ವಿ ತಂಡ ಎನಿಸಿಕೊಂಡರೂ ಮೊದಲ ಪಂದ್ಯದಲ್ಲಿ ಸೋಲುವ ಇತಿಹಾಸ ಬದಲಿಸುವ ತವಕದಲ್ಲಿದೆ.

ಮುಖಾಮುಖಿ: 29

ಆರ್​ಸಿಬಿ: 10

ಮುಂಬೈ: 19

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net