More

    ಹಿಂದಿನ ಸರ್ಕಾರದ ಎಲ್ಲ ಹಗರಣಗಳ ತನಿಖೆ: ಸಿದ್ದರಾಮಯ್ಯ ಸರ್ಕಾರ ಗಂಭೀರ ಚಿಂತನೆ

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೇಳಿ ಬಂದಿದ್ದ ವಿವಿಧ ಹಗರಣಗಳನ್ನು ತನಿಖೆಗೆ ಒಳಪಡಿಸುವ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವ ಬಗ್ಗೆ ಸರ್ಕಾರದಲ್ಲಿ ಗಂಭೀರ ಚರ್ಚೆ ನಡೆದಿದೆ.

    ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಲು 40 ಪರ್ಸೆಂಟ್, ಪೇಸಿಎಂ ಮೊದಲಾದ ವಿಷಯಗಳು ಪ್ರಮುಖ ಪಾತ್ರ ವಹಿಸಿವೆ. ಇಂತಹ ಸಂದರ್ಭದಲ್ಲಿ ತನಿಖೆಗೆ ಒಳಪಡಿಸದಿದ್ದರೆ ರಾಜಕೀಯವಾಗಿ ಹಿನ್ನಡೆ ಅನುಭವಿಸಬೇಕಾಗುತ್ತದೆ ಎಂಬುದು ಕಾಂಗ್ರೆಸ್ ಶಾಸಕರ ವಲಯದಲ್ಲಿ ಚರ್ಚೆ ನಡೆದಿರುವ ಕುತೂಹಲಕ್ಕೆ ಕಾರಣವಾಗಿದೆ. ಹಿಂದಿನ ಸರ್ಕಾರ ಚುನಾವಣೆಗೆ ಹೋಗುವ ಸಂದರ್ಭದಲ್ಲಿ ಕೈಗೊಂಡ ಕಾಮಗಾರಿಗಳಿಗೆ ಈಗಾಗಲೆ ತಡೆ ಹಾಕಲಾಗಿದೆ. ಎಲ್​ಒಸಿಗಳಿಗೂ ಬಿಡುಗಡೆ ಮಾಡದಂತೆ ಸರ್ಕಾರ ಸೂಚನೆ ನೀಡಿದೆ. ಇದರ ಮುಂದುವರಿದ ಭಾಗವಾಗಿಯೇ ಉಳಿದ ಹಗರಣಗಳ ಬಗ್ಗೆಯೂ ತನಿಖೆಗೆ ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

    ನೂತನ ಸರ್ಕಾರದಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರಮುಖವಾಗಿ ಬಿಟ್ ಕಾಯಿನ್ ಮತ್ತು ಪಿಎಸ್​ಐ ನೇಮಕಾತಿ ಹಗರಣಗಳನ್ನು ಬಯಲಿಗೆ ತಂದಿದ್ದರು. ಈ ಎರಡು ಅಕ್ರಮಗಳನ್ನು ರ್ತಾಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದಾಗಿ ಈಗಾಗಲೆ ಸ್ಪಷ್ಟಪಡಿಸಿದ್ದಾರೆ. ಅಂದರೆ ಆ ಎರಡು ಹಗರಣಗಳ ಬಗ್ಗೆ ತನಿಖೆ ಮಾಡಿಸಿ ಬಯಲಿಗೆ ತರುವುದು ಅವರ ಉದ್ದೇಶವಾಗಿದೆ. ಪ್ರಿಯಾಂಕ್ ಖರ್ಗೆ ಪಟ್ಟು ಹಿಡಿಯಲಿರುವ ಎರಡು ಹಗರಣಗಳು ಬಿಟ್ಟು ಉಳಿದ ಹಗರಣಗಳ ಬಗ್ಗೆಯೂ ಸರ್ಕಾರದಲ್ಲಿ ಚರ್ಚೆ ನಡೆದಿದೆ ಎಂದು ಮೂಲಗಳು ಖಚಿತಪಡಿಸಿವೆ.

    40 ಪರ್ಸೆಂಟ್ ಮುಖ್ಯ: ರಾಜ್ಯ ಗುತ್ತಿಗೆದಾರರ ಸಂಘ ಪ್ರಧಾನ ಮಂತ್ರಿಗೆ ರಾಜ್ಯ ಸರ್ಕಾರದ ಮೇಲೆ 40 ಪರ್ಸೆಂಟ್ ಕಮೀಷನ್ ಆರೋಪ ಮಾಡಿ ಬರೆದಿದ್ದ ಪತ್ರ ತೀವ್ರ ಸಂಚಲನ ಮೂಡಿಸಿತ್ತು. ಗುತ್ತಿಗೆದಾರರ ಸಂಘದವರು ಇದುವರೆಗೂ ಯಾರ ವಿರುದ್ಧವೂ ದಾಖಲೆ ಬಿಡುಗಡೆ ಮಾಡಿಲ್ಲ. ಆದರೆ, ಕೆಲವರ ಹೆಸರು ಹೇಳಿದ್ದಾರೆ. ಆದರೂ ಈ ವಿಚಾರ ಜನರ ಮನಸ್ಸಿನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಅಭಿಪ್ರಾಯ ಮೂಡಿಸುವಲ್ಲಿ ಸಾಕಷ್ಟು ಯಶಸ್ವಿಯಾಗಿತ್ತು. ಇದೀಗ ಆ ಹಗರಣವನ್ನು ತನಿಖೆಗೆ ಒಪ್ಪಿಸಿದರೆ ಎಲ್ಲ ಅಕ್ರಮ ಬಯಲಿಗೆ ಬರಲಿದೆ ಎಂಬುದು ಪ್ರಮುಖ ಕಾರಣವಾಗಿದೆ. ಚುನಾವಣೆಯ ಸಂದರ್ಭದಲ್ಲಿ 40 ಪರ್ಸೆಂಟ್ ಬಗ್ಗೆ ಪ್ರಸ್ತಾಪ ಮಾಡಿದಾಗಲೆಲ್ಲ, ಬಿಜೆಪಿ ದಾಖಲೆಯನ್ನು ಕೇಳುತ್ತಿತ್ತು. ಆದ್ದರಿಂದಲೇ ಕಾಂಗ್ರೆಸ್ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ ಎಂದು ಮೂಲಗಳು ಹೇಳಿವೆ.

    ಸಾವಿರಾರು ಕೋಟಿ ರೂ. ದುಂದು ವೆಚ್ಚ: ಸಮಾಜ ಕಲ್ಯಾಣ, ಎಸ್​ಸಿಪಿ, ಟಿಎಸ್​ಪಿ ಯೋಜನೆಯಲ್ಲಿ ಹಣದ ಬದಲಾವಣೆ, ಕರೊನಾ ಕಾಲದಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದ ಖರೀದಿಯ ಬಗ್ಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿಯೇ ಸಾಕಷ್ಟು ಚರ್ಚೆಯಾಗಿದೆ. ಕಾರ್ವಿುಕರ ಇಲಾಖೆಯ ಕಟ್ಟಡ ಕಾರ್ವಿುಕರ ಕಲ್ಯಾಣ ಮಂಡಳಿಯಲ್ಲಿ ದುಂದು ವೆಚ್ಚ, ಜಲ ಸಂಪನ್ಮೂಲ ಇಲಾಖೆಯ ಎಸ್​ಸಿಪಿ, ಟಿಎಸ್​ಪಿಯ ಯೋಜನೆಯಲ್ಲಿ ರಸ್ತೆ ಕಾಮಗಾರಿಗಳು, ಕೃಷಿ ಇಲಾಖೆಯಲ್ಲಿನ ಅಕ್ರಮಗಳು, ಅನೇಕ ಇಲಾಖೆಗಳಲ್ಲಿ ಒಂದೇ ಕಾಮಗಾರಿಗೆ ಎರಡು-ಮೂರು ಕಡೆಯಿಂದ ಬಿಲ್​ಗಳಾಗಿವೆ ಎಂಬ ಆರೋಪಗಳು ಇದ್ದು, ಸಾವಿರಾರು ಕೋಟಿ ರೂ. ಅಕ್ರಮಗಳಾಗಿವೆ ಎಂಬ ಅನುಮಾನ ಸರ್ಕಾರದಲ್ಲಿದೆ. ಆಗ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರೇ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಅಧಿಕಾರಕ್ಕೆ ಬಂದ ನಂತರ ಮೌನವಹಿಸಿದರೆ ಸಾರ್ವಜನಿಕರಿಗೆ ಅನುಮಾನ ಮೂಡುತ್ತದೆ. ಆದ್ದರಿಂದ ತನಿಖೆಗೆ ಒಪ್ಪಿಸಿ ಬಿಡುವುದು ಉತ್ತಮವೆಂಬ ಅಭಿಪ್ರಾಯ ಸರ್ಕಾರದಲ್ಲಿದೆ.

    ರಾಜಕೀಯ ಲಾಭ ಹೇಗೆ?: ವಿಧಾನಸಭೆಯಲ್ಲಿ 135 ಸ್ಥಾನಗಳನ್ನು ಗೆದ್ದಿರುವ ರೀತಿಯಲ್ಲಿಯೇ ಲೋಕಸಭಾ ಚುನಾವಣೆಯಲ್ಲಿ 15-20 ಸ್ಥಾನಗಳನ್ನು ಗೆಲ್ಲಲೇಬೇಕು. ಆದ್ದರಿಂದ ಸರ್ಕಾರದ ಗ್ಯಾರೆಂಟಿಗಳ ಜತೆಗೆ ಬಿಜೆಪಿಯ ವಿರುದ್ಧ ಜನಾಭಿಪ್ರಾಯವನ್ನು ಕಾಯ್ದಿರಿಸಿಕೊಳ್ಳಲು ಕಾಂಗ್ರೆಸ್ ಸಹ ಗಂಭೀರವಾಗಿದೆ. ತನಿಖೆಗೆ ಒಪ್ಪಿಸಿದರೆ ಜನರಲ್ಲಿಯೂ ಕಾಂಗ್ರೆಸ್ ಬಗ್ಗೆ ಉತ್ತಮ ಅಭಿಪ್ರಾಯ ಮೂಡುತ್ತದೆ, ಆದರಿಂದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ ಎಂದು ಸಿಎಲ್​ಪಿ ಮೂಲಗಳು ಹೇಳುತ್ತವೆ.

    ಸಿಎಲ್​ಪಿಯಲ್ಲಿಯೂ ಚರ್ಚೆ: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬುಧವಾರ ಬೆಳಗ್ಗೆ ನಡೆಯಲಿದೆ. ಆ ಸಭೆಯಲ್ಲಿ ಅನೇಕ ಶಾಸಕರು ಹಿಂದಿನ ಸರ್ಕಾರಗಳ ಅಕ್ರಮಗಳನ್ನು ತನಿಖೆಗೆ ಒಪ್ಪಿಸಲೇಬೇಕೆಂದು ಚರ್ಚೆ ನಡೆಸಲು ಸಜ್ಜಾಗಿದ್ದಾರೆ. ಶಾಸಕಾಂಗ ಪಕ್ಷದ ಅಭಿಪ್ರಾಯದಂತೆ ಸರ್ಕಾರ ತನಿಖೆಯ ಕುರಿತು ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಕೆಲ ಹಿರಿಯ ಶಾಸಕರು ತಿಳಿಸಿದರು.

    ಯಾವ ರೀತಿಯ ತನಿಖೆ: ಯಾವ ಹಗರಣಕ್ಕೆ ಯಾವ ರೀತಿಯ ತನಿಖೆಯನ್ನು ನಡೆಸಬೇಕು ಎಂಬುದನ್ನು ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ನಿರ್ಧಾರ ಮಾಡಲಾಗುತ್ತದೆ ಎಂದು ಮೂಲಗಳು ಖಚಿತಪಡಿಸಿವೆ.

    ಯಾವ ಯಾವ ವಿಷಯಗಳಲ್ಲಿ ತನಿಖೆ

    • ವಿವಿಧ ಕಾಮಗಾರಿಗಳಲ್ಲಿ 40 ಪರ್ಸೆಂಟ್ ಆರೋಪ
    • ಎಸ್​ಸಿಪಿಟಿಎಸ್​ಪಿಯಲ್ಲಿ ಹಣದ ವರ್ಗೀಕರಣ
    • ಕರೊನಾ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಖರೀದಿ
    • ಪಿಎಸ್​ಐ, ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ
    • ಕೃಷಿ, ಇಂಧನ ಇಲಾಖೆಗಳಲ್ಲಿ ನಡೆದಿದ್ದ ಅಕ್ರಮಗಳು
    • ಕಾರ್ವಿುಕ ಇಲಾಖೆಯಲ್ಲಿ ಕೋಟ್ಯಂತರ ರೂ. ಖರೀದಿ
    • ಆರೋಗ್ಯ ಇಲಾಖೆಯ ಆಂಬುಲೆನ್ಸ್ ಸಮಸ್ಯೆ
    • ಜಲ ಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ ಇಲಾಖೆಗಳಲ್ಲಿ ನಡೆದಿರಬಹುದಾದ ಅಕ್ರಮಗಳು

    ಹಾಲಿನ ಮತ್ತೊಂದು ಬ್ರ್ಯಾಂಡ್​ಗೂ ಅಮುಲ್ ಆತಂಕ; ಎಲ್ಲಿ, ಯಾವುದು?

    22 ವರ್ಷ ತನ್ನೊಳಗಿದ್ದ ಹೃದಯವನ್ನು 16 ವರ್ಷಗಳ ಬಳಿಕ ಮ್ಯೂಸಿಯಮ್​ನಲ್ಲಿ ಕಣ್ಣೆದುರೇ ಕಂಡಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts