ಹೋರಾಟಕ್ಕೂ ಜಗ್ಗದ ಇಲಾಖೆ! : ಚೆರ್ಕಳ- ಕಲ್ಲಡ್ಕ ಅಂತಾರಾಜ್ಯ ಹೆದ್ದಾರಿ ಶೋಚನೀಯಾವಸ್ಥೆಗಿಲ್ಲ ಪರಿಹಾರ

New Project (3)
Published on

ಪುರುಷೋತ್ತಮ ಪೆರ್ಲ ಕಾಸರಗೋಡು

ಚೆರ್ಕಳ- ಕಲ್ಲಡ್ಕ ಅಂತಾರಾಜ್ಯ ಸಂಪರ್ಕ ರಸ್ತೆಯ ಬದಿಯಡ್ಕ ಸನಿಹದ ಪಳ್ಳತ್ತಡ್ಕದಲ್ಲಿ ರಸ್ತೆ ಶೋಚನೀಯಾವಸ್ಥೆ ಇನ್ನೂ ಪರಿಹರಿಸಲಾಗಿಲ್ಲ. ತಿಂಗಳ ಹಿಂದೆ ನಾಗರಿಕರು ಒಟ್ಟು ಸೇರಿ ಹೋರಾಟ ನಡೆಸಿದರೂ ಫಲಕಾರಿಯಾಗಿಲ್ಲ..

ಚೆರ್ಕಳ- ಕಲ್ಲಡ್ಕ ಅಂತಾರಾಜ್ಯ ಸಂಪರ್ಕದ ರಸ್ತೆ ಚೆರ್ಕಳದಿಂದ ಉಕ್ಕಿನಡ್ಕವರೆಗೂ ಸಂಪೂರ್ಣ ಶಿಥಿಲಗೊಂಡಿದೆ. ಇದರಲ್ಲಿ ಪಳ್ಳತ್ತಡ್ಕ ಮತ್ತು ಚೆಡೇಕಲ್ಲು ಬಳಿ ರಸ್ತೆಯಲ್ಲಿ ಉಂಟಾಗಿರುವ ಹೊಂಡಗಳಿಂದ ವಾಹನ ಚಾಲಕರು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಖಾಸಗಿ ಬಸ್‌ಗಳ ಪಾಡು ಹೇಳತೀರದು.

ಮೂರು ವರ್ಷಗಳ ಹಿಂದೆ ಚೆರ್ಕಳ- ಕಲ್ಲಡ್ಕ ರಸ್ತೆಯ ಡಾಂಬರು ಕಾರ್ಯ ನಡೆಸಲಾಗಿದ್ದು, ಚೆರ್ಕಳದಿಂದ ಉಕ್ಕಿನಡ್ಕವರೆಗೆ ಒಬ್ಬ ಗುತ್ತಿಗೆದಾರ ಹಾಗೂ ಅಲ್ಲಿಂದ ಅಡ್ಕಸ್ಥಳವರೆಗೆ ಇನ್ನೊಬ್ಬ ಗುತ್ತಿಗೆದಾರಗೆ ವಹಿಸಿಕೊಡಲಾಗಿತ್ತು. ಉಕ್ಕಿನಡ್ಕದಿಂದ ಅಡ್ಕಸ್ಥಳವರೆಗಿನ ಕಾಮಗಾರಿ ಸಂಪೂರ್ಣಗೊಂಡಿದ್ದರೂ ಚೆರ್ಕಳದಿಂದ ಉಕ್ಕಿನಡ್ಕವರೆಗೆ ಎರಡನೇ ಲೇಯರ್ ಡಾಂಬರು ಕಾಮಗಾರಿ ನಡೆಸದಿರುವುದರಿಂದ ಪ್ರಸಕ್ತ ರಸ್ತೆ ಸಂಪೂರ್ಣ ಹಾಳಾಗಿದೆ. ಪ್ರಸಕ್ತ ರಸ್ತೆ ‘ಕಿಫ್‌ಬಿ’ ಮೇಲ್ನೋಟದಲ್ಲಿ ನಿರ್ವಹಣೆಯಿರುವುದರಿಂದ ಹೊಂಡ ಮುಚ್ಚುವ ಕೆಲಸವನ್ನೂ ಸಮರ್ಪಕವಾಗಿ ನಡೆಸುತ್ತಿಲ್ಲ.

ಪ್ರತಿಭಟನೆಗೂ ಇಲಾಖೆ ಡೊಂಟ್ ಕೇರ್

ಪಳ್ಳತ್ತಡ್ಕದಲ್ಲಿ ರಸ್ತೆಯಲ್ಲಿ ಉಂಟಾಗಿದ್ದ ಬೃಹತ್ ಹೊಂಡದಲ್ಲಿ ದಾಸ್ತಾನುಗೊಂಡಿದ್ದ ಮಳೆನೀರಲ್ಲಿ ಈಜುವ ಹಾಗೂ ರಸ್ತೆ ಹೊಂಡದ ಕೊಳಚೆ ನೀರಲ್ಲೇ ಸ್ನಾನ ಮಾಡುವ ಮೂಲಕ ಬದಿಯಡ್ಕ ಗ್ರಾಪಂ ಸದಸ್ಯ ಹಾಗೂ ಊರವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರೂ ಇಲಾಖೆ ಜಪ್ಪೆನ್ನಲಿಲ್ಲ. ಮಳೆ ಅಲ್ಪ ಕಡಿಮೆಯಾಗುತ್ತಿದ್ದರೂ ಬೃಹತ್ ಹೊಂಡ ಮುಚ್ಚುವ ಕಾರ್ಯಕ್ಕೂ ಇಲಾಖೆ ಮುಂದಾಗದಿರುವುದರಿಂದ ವಾಹನ ಚಾಲಕರು ಹಾಗೂ ಪ್ರಯಾಣಿಕರು ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚರಂಡಿ ನಿರ್ಮಾಣ ಅಗತ್ಯ

ರಸ್ತೆ ಅಂಚಿಗೆ ಸೂಕ್ತ ಚರಂಡಿ ನಿರ್ಮಾಣ ಮಾಡುವ ಮೂಲಕ ರಸ್ತೆಯ ಶೋಚನೀಯಾವಸ್ಥೆ ಬಹುತೇಕ ಕಡಿಮೆ ಮಾಡಬಹುದು. ಮಳೆಗಾಲ ಆರಂಭಕ್ಕೆ ಮೊದಲು ರಸ್ತೆ ಅಂಚಿಗಿರುವ ಚರಂಡಿ ಶುಚೀಕರಣಕ್ಕೆ ಮುಂದಾಗದಿರುವುದರಿಂದ ಮಳೆನೀರು ರಸ್ತೆಯಲ್ಲೇ ಹರಿದು ರಸ್ತೆ ಶಿಥಿಲಗೊಳ್ಳಲು ಕಾರಣವಾಗುತ್ತಿದೆ. ಬದಿಯಡ್ಕದಿಂದ ಉಕ್ಕಿನಡ್ಕವರೆಗೂ ಮಳೆನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಇಲಾಖೆ ಕಂಡೂ ಕಾಣದಂತೆ ವರ್ತಿಸುತ್ತಿದೆ.

ಚೆರ್ಕಳದಿಂದ ಉಕ್ಕಿನಡ್ಕವರೆಗೆ ರಸ್ತೆಯಲ್ಲಿ ಉಂಟಾಗಿರುವ ಹೊಂಡ ಮುಚ್ಚುವಂತೆ ಆಗ್ರಹಿಸಿ ನಾಗರಿಕರನ್ನು ಒಟ್ಟು ಸೇರಿಸಿ ಹಲವು ಸಮಯದಿಂದ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ರಸ್ತೆ ಕಳಪೆ ಕಾಮಗಾರಿ ಜತೆಗೆ ನಿರ್ವಹಣೆ ಕೊರತೆಯಿಂದ ಇಂದು ರಸ್ತೆ ಸಂಪೂರ್ಣ ಹದಗೆಡುವಂತಾಗಿದೆ. ಸೂಕ್ತ ರೀತಿಯಲ್ಲಿ ಹೊಂಡ ಮುಚ್ಚುವ ಕಾರ್ಯಕ್ಕೆ ಇಲಾಖೆ ತಕ್ಷಣ ಮುಂದಾಗದಿದ್ದಲ್ಲಿ ನಾಗರಿಕರನ್ನು ಒಟ್ಟು ಸೇರಿಸಿ ಪ್ರಬಲ ಹೋರಾಟ ನಡೆಸಲಾಗುವುದು. ಹಮೀದ್ ಪಳ್ಳತ್ತಡ್ಕ, ಬದಿಯಡ್ಕ ಗ್ರಾಮ ಪಂಚಾಯಿತಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net