ದುಸ್ಥಿತಿಯಲ್ಲಿರುವ ಅಂತಾರಾಜ್ಯ ಸಂಪರ್ಕ ರಸ್ತೆ

Sul_Bellipady
Published on

ಸುಳ್ಯ: ಕರ್ನಾಟಕ-ಕೇರಳ ಸಂಪರ್ಕ ರಸ್ತೆಯಾದ ದೇವರಗುಂಡದಿಂದ ಬನಾರಿಗೆ ಸಾಗುವ ರಸ್ತೆ ತೀರಾ ಹದಗೆಟ್ಟಿದ್ದು, ಶಾಸಕಿ ಭಾಗೀರಥಿ ಮುರುಳ್ಯ ಭಾನುವಾರ ಬೆಳ್ಳಿಪ್ಪಾಡಿಗೆ ಭೇಟಿ ನೀಡಿ ಅಭಿವೃದ್ಧಿಪಡಿಸುವ ಭರವಸೆ ನೀಡಿದರು.

ಸುಳ್ಯ-ಕಾಸರಗೋಡು ಅಂತಾರಾಜ್ಯ ರಸ್ತೆಯಲ್ಲಿ ದೇವರಗುಂಡದಿಂದ ಬನಾರಿಗೆ ಸುಮಾರು 3 ಕಿ.ಮಿ ದೂರ ಇದೆ. ಇದರಲ್ಲಿ ದೇವರಗುಂಡದಿಂದ ಬೆಳ್ಳಿಪ್ಪಾಡಿ ಮೈಕ್ರೋ ಟವರ್ ಸಮೀಪದವರೆಗೆ ಸುಮಾರು ಒಂದು ಕಿ.ಮೀ ರಸ್ತೆ ಕರ್ನಾಟಕದ ಭಾಗವಾಗಿದ್ದು ಇದೀಗ ತೀರಾ ಹದಗೆಟ್ಟಿದ್ದು ಸಂಚಾರಕ್ಕೆ ಸಂಕಷ್ಟ ತಂದೊಡ್ಡಿದೆ.

ದೇಲಂಪಾಡಿ, ಬನಾರಿ, ಬೆಳ್ಳಿಪ್ಪಾಡಿ ವಿವಿಧ ಭಾಗಗಳಿಂದ ನೂರಾರು ಮಂದಿ ಸಾರ್ವಜನಿಕರು, ವಿದ್ಯಾರ್ಥಿಗಳು ದಿನನಿತ್ಯದ ಅಗತ್ಯಕ್ಕಾಗಿ ಈ ರಸ್ತೆಯ ಮೂಲಕ ಸುಳ್ಯಕ್ಕೆ ಹಾಗೂ ಕಾಸರಗೋಡಿಗೆ ಹೋಗುತ್ತಾರೆ. ಕರ್ನಾಟಕದ ಒಂದು ಕಿ.ಮೀ ಅಭಿವೃದ್ಧಿಪಡಿಸಿ ಸರ್ವಋತು ರಸ್ತೆಯಾಗಿ ಅಭಿವೃದ್ಧಿಪಡಿಸಬೇಕು ಎಂದು ಸ್ಥಳೀಯರು ಶಾಸಕರಲ್ಲಿ ವಿನಂತಿಸಿದಾಗ ರಸ್ತೆ ಅಭಿವೃದ್ಧಿ ಪಡಿಸಲು ಎಲ್ಲ ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ಸ್ಥಳೀಯರಾದ ಚಂದ್ರಶೇಖರ ಬೆಳ್ಳಿಪ್ಪಾಡಿ, ಯು.ಬಿ.ಶ್ರೀನಿಲಯ ಬೆಳ್ಳಿಪ್ಪಾಡಿ, ಧನಂಜಯ ಬೆಳ್ಳಿಪ್ಪಾಡಿ, ಶಿವರಾಮ ಗೌಡ ಬೆಳ್ಳಿಪ್ಪಾಡಿ, ಗೋಪಾಲಕೃಷ್ಣ ಮುದಿಯಾರು, ಪ್ರಸಾದ್ ಕಾಟೂರು ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net