

ಮಂಗಳೂರು: ಸಂಘನಿಕೇತನದ ಕೇಶವ ಸ್ಮತಿ ಸಂವರ್ಧನಾ ಸಮಿತಿ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 77ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ. 7ರಿಂದ 11ರವೆರೆಗೆ ಸಂಘನಿಕೇತನದಲ್ಲಿ ನಡೆಯಲಿದೆ ಎಂದು ಸಂಘನಿಕೇತನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಎಂ. ಸತೀಶ ಪ್ರಭು ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಗಣೇಶೋತ್ಸವದ ಯಶಸ್ಸಿಗೆ ಕೆ. ಪ್ರವೀಣ್ ಕುಮಾರ್ ಅಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸೆ.7ರಂದು ಬೆಳಗ್ಗೆ 10ಕ್ಕೆ ಮಣಿಪಾಲ ಗ್ಲೋಬಲ್ ಎಜ್ಯುಕೇಶನ್‌ನ ಚೇರ್‌ಮೆನ್ ಟಿ. ವಿ. ಮೋಹನದಾಸ ಪೈ ಗಣೇಶೋತ್ಸವ ಉದ್ಘಾಟಿಸುವರು. ಧ್ವಜಾರೋಹಣ, ವಂದೇ ಮಾತರಂ, ಗಣಹೋಮ, ಮಹಾಪೂಜೆ ಬಳಿಕ ರಥಬೀದಿಯ ಶ್ರೀ ವೀರವೆಂಕಟೇಶ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ. ಗಣೇಶೋತ್ಸವ ಸಮಿತಿ ವತಿಯಿಂದ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಸಂಜೆ 7ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಲೋಟಸ್ ಪ್ರಾಪರ್ಟಿಸ್‌ನ ಜಿತೇಂದ್ರ ಕೊಟ್ಟಾರಿ ಬಹುಮಾನ ವಿತರಿಸಲಿರುವರು. 7.45ಕ್ಕೆ ಮೂಡಗಣಪತಿ ಪೂಜೆ ಹಾಗೂ ರಂಗಪೂಜೆ ನಡೆಯಲಿದೆ ತಿಳಿಸಿದರು.
ಸೆ.8ರಂದು ಸಂಜೆ 6ಕ್ಕೆ ವಿದುಷಿ ಮೇಧಾ ವಿದ್ಯಾಭೂಷಣ್ ಅವರಿಂದ ಭಜನ್ ಸಂಧ್ಯಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊಫೆಶನಲ್ ಕೊರಿಯರ್ಸ್‌ನ ನರೇಂದ್ರ ನಾಯಕ್ ಮಿತ್ತಬೈಲ್ ವಹಿಸಲಿರುವರು. ಸೆ.9ರಂದು ಸಂಜೆ 6ಕ್ಕೆ ಕರ್ನಾಟಕ ಯಕ್ಷಧಾಮದ ಜನಾರ್ದನ ಹಂದೆ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ ಭಕ್ತಿವಿಜಯ ನಡೆಯಲಿದೆ. ಅಧ್ಯಕ್ಷತೆಯನ್ನು ಸಿಟಾಡೆಲ್ ಡೆವಲಪರ್ಸ್‌ನ ನಿರ್ದೇಶಕ ರಾಮಕುಮಾರ್ ಬೇಕಲ್ ವಹಿಸಲಿದ್ದಾರೆ ಎಂದರು.
ಸೆ.10ರಂದು ಬೆಳಿಗ್ಗೆ 5 ಗಂಟೆಗೆ ಉಷಃಕಾಲ ಪೂಜೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 6 ಗಂಟೆಗೆ ಸನಾತನ ನಾಟ್ಯಾಲಯದ ನೃತ್ಯ ವೈವಿಧ್ಯ-ಸನಾತನ ರಾಷ್ಟ್ರಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ್ ಬೀಡಿ ವರ್ಕ್ಸ್‌ನ ಬಿ. ವೆಂಕಟೇಶ್ ಪೈ ವಹಿಸಲಿರುವರು. ಪ್ರತೀ ದಿನವು ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮವು ನಡೆಯಲಿದೆ ಎಂದರು.
*ಶೋಭಾಯಾತ್ರೆಗೆ ಚಾಲನೆ
ಸೆ.11ರಂದು ಮಧ್ಯಾಹ್ನ 1.15ಕ್ಕೆ ಮಹಾಪೂಜೆ, ವಿಸರ್ಜನಾ ಪೂಜೆ, ಮಧ್ಯಾಹ್ನ 3.30ಕ್ಕೆ ವಾದ್ಯಗೋಷ್ಠಿ, ಸಂಜೆ 5.30ಕ್ಕೆ ಸಂಕಲ್ಪ ಕಾರ್ಯಕ್ರಮ, ಸಂಜೆ 6.15ಕ್ಕೆ ಶೋಭಾಯಾತ್ರೆ ನಡೆಯಲಿದೆ. ಆದಿದ್ರಾವಿಡ ಸೇವಾ ಸಂಘದ ಅಧ್ಯಕ್ಷ ರಘುನಾಥ ಅತ್ತಾವರ ಶೋಭಾಯಾತ್ರೆಗೆ ಚಾಲನೆ ನೀಡುವರು. ಶೋಭಾಯಾತ್ರೆಯು ಉತ್ಸವ ಸ್ಥಾನದಿಂದ ಹೊರಟು ಮಣ್ಣಗುಡ್ಡ, ಅಳಕೆ, ನ್ಯೂಚಿತ್ರ ಜಂಕ್ಷನ್, ರಥಬೀದಿಯಾಗಿ, ಮಹಮ್ಮಾಯ ಕೆರೆಯಲ್ಲಿ ಪೂಜೆ, ವಂದೇ ಮಾತರಂ, ಧ್ವಜಾವತರಣ ನಂತರ ವಿಸರ್ಜನೆ ನಡೆಯಲಿದೆ ಎಂದು ಸತೀಶ್ ಪ್ರಭು ತಿಳಿಸಿದರು.
ಕೇಶವ ಸ್ಮೃತಿ ಸಂವರ್ಧನಾ ಸಮಿತಿ ಕಾರ್ಯದರ್ಶಿ ಗಜಾನನ ಪೈ, ಸಂಘನಿಕೇತನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ. ಪ್ರವೀಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಜಿ.ಸುರೇಶ್ ವಿ.ಕಾಮತ್, ಕಾರ್ಯದರ್ಶಿ ಯು.ನಂದನ ಮಲ್ಯ, ಕಾರ್ಯಕಾರಿಣಿ ಸದಸ್ಯ ಪ್ರಕಾಶ್ ಗರೋಡಿ ಉಪಸ್ಥಿತರಿದ್ದರು.
---------------
ವಿವಿಧ ಸ್ಪರ್ಧೆ ಆಯೋಜನೆ
ಜನರಲ್ಲಿ ಧಾರ್ಮಿಕ ಶ್ರದ್ಧೆ ಮತ್ತು ಭಕ್ತಿಯ ಮೂಲಕ ರಾಷ್ಟ್ರೀಯ ಚಿಂತನೆ, ಸಾಮಾಜಿಕ ಬದ್ಧತೆ ಮೂಡಿಸುವ ಆಕಾಂಕ್ಷೆಯೊಂದಿಗೆ ಬಾಲಗಂಗಾಧರ್ ತಿಲಕ್ ಸ್ವಾತಂತ್ರ ಪೂರ್ವದಲ್ಲಿ ಯಾವ ಉದ್ದೇಶವನ್ನು ಇಟ್ಟುಕೊಂಡು ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಆರಂಭಿಸಿದರೋ, ಅದೇ ಉದ್ದೇಶ, ಪ್ರೇರಣೆಯಿಂದ ಸಂಘನಿಕೇತನದಲ್ಲಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಟ್ರಸ್ಟ್ ಆಶ್ರಯದಲ್ಲಿ ಪ್ರತೀವರ್ಷ ಸಾರ್ವಜನಿಕ ಶ್ರೀ ಗಣೇಶೋತ್ಸವ, ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರುಕುಡಿಕೆ ಉತ್ಸವ ನಡೆಸಲಾಗುತ್ತಿದೆ. ಈ ಸಂದರ್ಭ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.
---------------
ರೂ. 10 ಲಕ್ಷಕ್ಕೂ ಮಿಕ್ಕಿ ಮೊತ್ತವನ್ನು ವಿದ್ಯಾನಿಧಿ ಯೋಜನೆ
ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳ ನೂರಕ್ಕೂ ಹೆಚ್ಚು ಆರ್ಥಿಕ ದುರ್ಬಲ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಪ್ರತೀವರ್ಷವೂ ರೂ. 10 ಲಕ್ಷಕ್ಕೂ ಮಿಕ್ಕಿ ಮೊತ್ತವನ್ನು ವಿದ್ಯಾನಿಧಿ ಯೋಜನೆಯಲ್ಲಿ ನೀಡುತ್ತಿದ್ದೇವೆ. ಸಂಘನಿಕೇತನದಲ್ಲಿ ಪ್ರತಿದಿನವೂ ಸಾರ್ವಜನಿಕರಿಗಾಗಿ ಯೋಗ ತರಗತಿ, ಸಂಸ್ಕೃತ ಕಲಿಕಾ ತರಗತಿ, ಸರಳ ಸಂಸ್ಕೃತ ಸಂಭಾಷಣಾ ಶಿಬಿರಗಳು ನಡೆಯುತ್ತಿವೆ. ವಿಕಸನ ಮನೋವಿಕಾಸ ಸೇವಾಕೇಂದ್ರದಲ್ಲಿ ಮನೋ ವೈದ್ಯರಿಂದ ಆಪ್ತಸಮಾಲೋಚನಾ ಸಭೆ ನಡೆಯುತ್ತಿವೆ. ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ ಪರಿಚಯಿಸಲು ಬಾಲಸಂಸ್ಕಾರಕೇಂದ್ರ, ಬಾಲಗೋಕುಲ ತರಬೇತಿಗಳು ನಡೆಯುತ್ತಿವೆ. ಮಹಾನಗರದ ಸೇವಾಬಸ್ತಿ (ದಲಿತ ಕಾಲೊನಿ)ಗಳಲ್ಲಿ ವೈದ್ಯಕೀಯ ಶಿಬಿರಗಳು ಪ್ರತೀವಾರವು ನಡೆಯುತ್ತಿವೆ.