ನಿರ್ಲಕ್ಷೃದ ವಾಹನ ಚಾಲನೆಯಿಂದ ಜೀವ ಹಾನಿ : ಜಿ.ಡಿ.ಮೀನಾ ಕಿವಿಮಾತು

jatha
ಕೊಂಕಣ ರೈಲ್ವೆಯಿಂದ ಅಂತಾರಾಷ್ಟ್ರೀಯ ಲೆವೆಲ್ ಕ್ರಾಸಿಂಗ್ ಗೇಟ್ ಜಾಗೃತಿ ಅಭಿಯಾನ ಗುರುವಾರ ನಡೆಯಿತು. ಕೊಂಕಣ ರೈಲ್ವೆ ಮಂಗಳೂರು ವಲಯದ ಅಸಿಸ್ಟೆಂಟ್ ಟ್ರಾಫಿಕ್ ಮ್ಯಾನೇಜರ್ ಜಿ.ಡಿ.ಮೀನಾ, ಜೂನಿಯರ್ ಇಂಜಿನಿಯರ್ ಅನಿಲ್, ಮೂಲ್ಕಿ ವಲಯದ ಸಿಬ್ಬಂದಿ ಭಾರತಿ ಡಿ. ಕೋಟ್ಯಾನ್, ಜ್ಯೋತಿ ಮೊದಲಾದವರಿದ್ದರು.
Published on

ಹಳೆಯಂಗಡಿ: ರೈಲ್ವೆ ಗೇಟ್ ಬಳಿ ವಾಹನ ಸವಾರರು ಸಾವಧಾನದಿಂದ ಇರಬೇಕು. ರೈಲ್ವೆ ಗೇಟ್ ಹಾಕುವಾಗ ಅಥವಾ ತೆಗೆಯುವಾಗ ತುರ್ತು ನಿರ್ಗಮನ ಅಪಘಾತಕ್ಕೆ ಕಾರಣವಾಗಬಹುದು. ರೈಲು ಬರುವಾಗ ಮುಚ್ಚಿದ ಗೇಟ್‌ನಿಂದ ಸುರಕ್ಷಿತ ಅಂತರದಲ್ಲಿ ವಾಹನಗಳನ್ನು ನಿಲ್ಲಿಸಬೇಕು. ಅಜಾಗರೂಕತೆಯಿಂದ ವಾಹನ ಚಲಾಯಿಸಿದರೆ ಜೀವ ಹಾನಿ ಸಾಧ್ಯತೆಯೇ ಅಧಿಕ ಎಂದು ಕೊಂಕಣ ರೈಲ್ವೆ ಮಂಗಳೂರು ವಲಯದ ಅಸಿಸ್ಟೆಂಟ್ ಟ್ರಾಫಿಕ್ ಮ್ಯಾನೇಜರ್ ಜಿ.ಡಿ.ಮೀನಾ ಹೇಳಿದರು.

ಕೊಂಕಣ ರೈಲ್ವೆ ಅಧಿಕಾರಿಗಳು ಮೂಲ್ಕಿ ಪರಿಸರದ ಹಳೆಯಂಗಡಿಯ ಇಂದಿರಾ ನಗರ ರೈಲ್ವೆ ಗೇಟ್ ಬಳಿ ನಡೆಸಿದ ಅಂತಾರಾಷ್ಟ್ರೀಯ ಲೆವೆಲ್ ಕ್ರಾಸಿಂಗ್ ಗೇಟ್ ಜಾಗೃತಿ ದಿನದ ಅಭಿಯಾನದಲ್ಲಿ ಅವರು ಮಾತನಾಡಿದರು.

ಕೊಂಕಣ ರೈಲ್ವೆ ಮಂಗಳೂರು ವಿಭಾಗದ ಜೂನಿಯರ್ ಇಂಜಿನಿಯರ್ ಅನಿಲ್ ಮಾತನಾಡಿ, ರೈಲ್ವೆ ಗೇಟ್ ಮುಚ್ಚಿದಾಗ ವಾಹನವನ್ನು ಗೇಟ್ ಬ್ಯಾರಿಯರ್ ಪಕ್ಕದಲ್ಲಿ ಅಥವಾ ಕೆಳಗಡೆ ಪಾಸ್ ಮಾಡಲು, ಪಾದಚಾರಿ ಹಾಗೂ ಮಕ್ಕಳನ್ನು ರೈಲ್ವೆ ಹಳಿ ದಾಟುವುದಕ್ಕೆ ಪ್ರೋತ್ಸಾಹಿಸಬೇಡಿ. ರೈಲ್ವೆ ಸುರಕ್ಷೆಯ ನಿಯಮಗಳನ್ನು ಪಾಲಿಸಿ ಜನ ಸ್ನೇಹಿಯಾಗಿ ಎಂದರು.

ಬಳಿಕ ಅಣಕು ಪ್ರದರ್ಶನ, ವಾಹನ ಸವಾರರಿಗೆ ಕರಪತ್ರ ನೀಡುವ ಮೂಲಕ ನಿಯಮಗಳ ಬಗ್ಗೆ ಮನವರಿಕೆ ಮಾಡಲಾಯಿತು.

ಈ ಸಂದರ್ಭ ರೈಲ್ವೆ ಇಲಾಖೆ ಮೂಲ್ಕಿ ವಲಯದ ಸಿಬ್ಬಂದಿ ಭಾರತಿ ಡಿ. ಕೋಟ್ಯಾನ್, ಜ್ಯೋತಿ, ಗಣೇಶ್ ಗೌಡ ಪ್ರದೀಪ್, ಗಿರೀಶ್ ಕೊಲಕಾಡಿ, ನೇಹಾ, ಗಣೇಶ್ ಮತ್ತಿತರರು ಅಣಕು ಪ್ರದರ್ಶನದಲ್ಲಿ ಭಾಗಿಯಾದರು. ಬಳಿಕ ಮೂಲ್ಕಿ ಪರಿಸರದ ಅನೇಕ ಕಡೆಗಳ ರೈಲ್ವೆ ಕ್ರಾಸಿಂಗ್ ಬಳಿ ಜನರಿಗೆ ಕರ ಪತ್ರಗಳನ್ನು ವಿತರಿಸಿ ಲೆವೆಲ್ ಕ್ರಾಸಿಂಗ್ ಎಚ್ಚರಿಕೆ ಅಭಿಯಾನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net