

ಬೆಂಗಳೂರು: ವಿದ್ಯಾರ್ಥಿಗಳನ್ನು ಶೈಕ್ಷಣಿಕ ವರ್ಷಾರಂಭದಿಂದಲೇ ಓದಿನಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಮತ್ತು ಪರೀಕ್ಷಾ ಒತ್ತಡ ನಿವಾರಣೆ ಮಾಡುವ ನಿಟ್ಟಿನಲ್ಲಿ 2023-24ನೇ ಸಾಲಿನಿಂದ ಪ್ರಥಮ ಮತ್ತು ದ್ವಿತೀಯ ಪಿಯುಸಿ ಕಲಾ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೂ 20 ಆಂತರಿಕ ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಮಂಗಳವಾರ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಇಲ್ಲಿಯವರೆಗೂ ವಿಜ್ಞಾನ, ಗಣಿತ, ರಸಾಯನಶಾಸ, ಭೌತಶಾಸ, ಜೀವಶಾಸ್ತ್ರ ಸೇರಿ ಇತರೆ 37 ವಿಷಯಗಳಿಗೆ 30 ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆ ಮತ್ತು 70 ಅಂಕಗಳಿಗೆ ಥಿಯೆರಿ ಪರೀಕ್ಷೆ ನಡೆಸಿ 100 ಅಂಕಗಳನ್ನು ಪರಿಗಣಿಸಲಾಗುತ್ತಿತ್ತು. ಪ್ರಾಯೋಗಿಕ ಪರೀಕ್ಷೆ ಇಲ್ಲದ ಕಲಾ ಮತ್ತು ವಾಣಿಜ್ಯ ವಿಭಾಗದ ವಿಷಯಗಳಿಗೆ 100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತಿತ್ತು. ಅದನ್ನು 2023-24ನೇ ಸಾಲಿನಿಂದ 20 ಆಂತರಿಕ ಮತ್ತು 80 ಥಿಯರಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಆಂತರಿಕ ಅಂಕಗಳಿಗೆ ಮಾನದಂಡವೇನು?
1 ಮತ್ತು 2ನೇ ಕಿರುಪರೀಕ್ಷೆ ಹಾಗೂ ಮಧ್ಯವಾರ್ಷಿಕ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳಲ್ಲಿ ಉತ್ತಮವಾದ ಎರಡನ್ನು 10 ಅಂಕಗಳಿಗೆ ಪರಿವರ್ತಿಸಿ ಸರಾಸರಿ ಅಂಕಗಳನ್ನು ನೀಡುವುದು. ಉಳಿದ 10 ಅಂಕಗಳಿಗೆ ಕಾಲೇಜು ಹಂತದಲ್ಲಿ ಪ್ರಾಜೆಕ್ಟ್ ಹಾಗೂ ಅಸೈನ್‌ಮೆಂಟ್‌ಗಳನ್ನು ನೀಡುವುದು. (ಪ್ರಾಜೆಕ್ಟ್ ಹಾಗೂ ಅಸೈನ್‌ಮೆಂಟ್‌ಗಳಿಗೆ ಬರವಣಿಗೆ ವಿಭಾಗಕ್ಕೆ 5 ಅಂಕ, ಪ್ರಸ್ತುತಪಡಿಸುವಿಕೆಗೆ 3 ಅಂಕ ಮತ್ತು ಸಂದರ್ಶನಕ್ಕೆ 2 ಅಂಕಗಳನ್ನು ನಿಗದಿ ಮಾಡಲಾಗಿದೆ)
ಒಂದು ವೇಳೆ ವಿದ್ಯಾರ್ಥಿಯು 1 ಮತ್ತು 2ನೇ ಕಿರು ಪರೀಕ್ಷೆ ಹಾಗೂ ಮಧ್ಯವಾರ್ಷಿಕ ಪರೀಕ್ಷೆಯಲ್ಲಿ ಯಾವುದಾದರೂ ಒಂದರಲ್ಲಿ ಗೈರು ಹಾಜರಾಗಿದ್ದರೆ, ಉಳಿದ 2 ಪರೀಕ್ಷೆಗಳಲ್ಲಿ ಗಳಿಸಿರುವ ಅಂಕಗಳನ್ನು 10 ಅಂಕಗಳಿಗೆ ಪರಿವರ್ತಿಸಿ ಸರಾಸರಿ ತೆಗೆದುಕೊಳ್ಳಬೇಕು.
ಒಂದು ವೇಳೆ ವಿದ್ಯಾರ್ಥಿಯು ಕಿರು ಪರೀಕ್ಷೆ ಮತ್ತು ಮಧ್ಯವಾರ್ಷಿಕ ಪರೀಕ್ಷೆಗೆ ಗೈರು ಹಾಜರಾಗಿದ್ದರೆ, ವಾರ್ಷಿಕ ಪರೀಕ್ಷೆಯಲ್ಲಿ 80 ಅಂಕಗಳಿಗೆ ಕನಿಷ್ಠ ಉತ್ತೀರ್ಣಗೊಳ್ಳಲು ಬೇಕಾದ 35 ಅಂಕಗಳನ್ನು ಪಡೆಯಬೇಕು. ಇದು ಕೇವಲ ರೆಗ್ಯೂಲರ್ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗಲಿದ್ದು, ಪುನರಾವರ್ತಿತ ಮತ್ತು ಖಾಸಗಿ ವಿದ್ಯಾರ್ಥಿಗಳಿಗೆ ಅನ್ವಯವಾಗುವುದಿಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ಕುಮಾರ್ ಸಿಂಗ್, ಪಿಯು ಇಲಾಖೆ ನಿರ್ದೇಶಕಿ ಸಿಂಧೂ ರೂಪೇಶ್, ಶಾಲಾ ಶಿಕ್ಷಣ ಆಯುಕ್ತೆ ಬಿ.ಬಿ. ಕಾವೇರಿ ಹಾಗೂ ಎಸ್‌ಎಸ್‌ಕೆ ಯೋಜನಾ ನಿರ್ದೇಶಕ ಆರ್. ರಾಮಚಂದ್ರನ್ ಉಪಸ್ಥಿತರಿದ್ದರು.