ಯುವತಿಯೊಂದಿಗೆ ಪಾದ್ರಿ ನೃತ್ಯ: ವಿಡಿಯೋ ಪೋಸ್ಟ್ ಮಾಡಿದ ಕಾಲಿವುಡ್ ನಟ ಅರೆಸ್ಟ್

video (1)
Published on

ತಮಿಳುನಾಡು: ಖ್ಯಾತ ಸ್ಟಂಟ್ ಮಾಸ್ಟರ್ ಮತ್ತು ನಟ ಕನಲ್ ಕಣ್ಣನ್ ಅವರನ್ನು ತಮಿಳುನಾಡಿನ ನಾಗರ್‌ಕೋಯಿಲ್‌ನಲ್ಲಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಡಿಎಂಕೆ ಮುಖಂಡರೊಬ್ಬರು ನೀಡಿದ ದೂರಿನ ಮೇರೆಗೆ ಕಣ್ಣನ್ ಅವರನ್ನು ಬಂಧಿಸಲಾಗಿದೆ.

ಸುದ್ದಿ ಸಂಸ್ಥೆ ಎಎನ್‌ಐ ಟ್ವೀಟ್‌ನಲ್ಲಿ ಕನಲ್ ಕಣ್ಣನ್ ಅವರನ್ನು ಬಂಧಿಸಿರುವುದನ್ನು ದೃಢಪಡಿಸಿದೆ. "ಕಾಲಿವುಡ್ ಸ್ಟಂಟ್ ಮಾಸ್ಟರ್ ಮತ್ತು ನಟ ಕನಲ್ ಕಣ್ಣನ್ ಅವರನ್ನು ನಾಗರ್‌ಕೋಯಿಲ್‌ನಲ್ಲಿ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯೊಂದಿಗೆ ಪಾದ್ರಿಯೊಬ್ಬರು ನೃತ್ಯ ಮಾಡುವ ವೀಡಿಯೊವನ್ನು ಕನಲ್ ಕಣ್ಣನ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ" ಎಂದು ಟ್ವೀಟ್‌ ಮಾಡಲಾಗಿದೆ.

ಕನಲ್ ಕಣ್ಣನ್ ತನ್ನ ಟ್ವಿಟರ್ ಖಾತೆಯಲ್ಲಿ ಪಾದ್ರಿ ಯುವತಿಯೊಂದಿಗೆ ನೃತ್ಯ ಮಾಡುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ ಬಂಧನವಾಗಿದೆ. ಕಣ್ಣನ್ ಅವರು ಜೂನ್ 18 ರಂದು ಈ ವಿಡಿಯೋ ಪೋಸ್ಟ್ ಮಾಡಿದ್ದು, ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜತೆಗೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಟೀಕೆ ವ್ಯಕ್ತವಾಗಿದೆ.

ಸ್ಟಂಟ್ ಮಾಸ್ಟರ್ ಕನಲ್ ಕಣ್ಣನ್, ತಮಿಳು ಚಿತ್ರೋದ್ಯಮದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್‌ ಅವರಿಂದ ಹಿಡಿದು ಥಲಪತಿ ವಿಜಯ್​​​​ವರೆಗೆ ಹಲವಾರು ಪ್ರಮುಖ ನಟರೊಂದಿಗೆ ಕೆಲಸ ಮಾಡಿದ್ದಾರೆ. ಜನಪ್ರಿಯ ಹಿಂದೂ ಸಂಘಟನೆಯಾದ ಹಿಂದೂ ಮುನ್ನೈನ ರಾಜ್ಯಾಧ್ಯಕ್ಷರೂ ಆಗಿದ್ದಾರೆ. ಟ್ವೀಟ್‌ನಲ್ಲಿ, ಹಿಂದೂ ಮುನ್ನೈ ಕನಲ್ ಕಣ್ಣನ್ ಬಂಧನವನ್ನು ಖಂಡಿಸಿದೆ ಮತ್ತು ರಾಜ್ಯ ಪೊಲೀಸರ ಕ್ರಮದ ವಿರುದ್ಧ ಜುಲೈ 11 ರಂದು ಸಂಜೆ 4 ಗಂಟೆಗೆ ಪ್ರತಿಭಟನೆ ನಡೆಸುವುದಾಗಿ ಹೇಳಿದೆ.

ಪಿಟಿಐ ವರದಿಯ ಪ್ರಕಾರ, ಕಳೆದ ವರ್ಷ ದ್ರಾವಿಡ ಸಂಘಟನೆಯ ದೂರಿನ ನಂತರ, ವಿಚಾರವಾದಿ ನಾಯಕ ಪೆರಿಯಾರ್ ಇವಿ ರಾಮಸಾಮಿ ವಿರುದ್ಧ ನೀಡಿದ ಹೇಳಿಕೆಗಾಗಿ ಶ್ರೀ ಕಣ್ಣನ್ ಅವರನ್ನು ಬಂಧಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net