

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆ ಹಾಗೂ ಸುರಕ್ಷತೆಗೆ ಸಂಬಂಧಪಟ್ಟಂತೆ ಪಡುಬಿದ್ರೆಯಿಂದ ಬೈಂದೂರಿನ ಶಿರೂರುವರೆಗೆ ಸ್ಥಳ ಪರಿಶೀಲನೆ ಮಾಡುತ್ತಿದ್ದು, ಅಗತ್ಯವಿರುವಲ್ಲಿ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಹೇಳಿದರು.
ಮಂಗಳವಾರ ರಾಷ್ಟ್ರೀಯ ಹೆದ್ದಾರಿಯ ವಿವಿಧೆಡೆ ವೀಕ್ಷಣೆ ಮಾಡಿ ಕುಂದಾಪುರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು.
ಎಸ್‌ಪಿ ಡಾ.ಅರುಣ್, ಸುಗಮ ಸಂಚಾರಕ್ಕೆ ತೊಂದರೆ ಆಗುವಲ್ಲಿ ಕಾಮಗಾರಿ ಮಾಡಲೇಬೇಕು. ಸ್ಥಳೀಯಾಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ನಿರ್ವಹಿಸಿದಾಗ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಗುತ್ತಿಗೆದಾರರು ಸಮರ್ಪಕವಾಗಿ ಕಾಮಗಾರಿ ನಿರ್ವಹಿಸುತ್ತಿಲ್ಲ. ಕೆಲವು ವರ್ಷಗಳಿಂದ ದೂರುಗಳಿದ್ದರೂ ಸ್ಪಂದಿಸುತ್ತಿಲ್ಲ. ಮಳೆಗಾಲದಲ್ಲಿ ಸರ್ವೀಸ್ ರಸ್ತೆಯಲ್ಲಿ ನೀರು ನಿಲ್ಲುತ್ತದೆ. ಚರಂಡಿಯಲ್ಲಿ ನೀರು ಹರಿಯುವುದಿಲ್ಲ. ಸಚಿವರು, ಸಂಸದರು ಯಾರು ಹೇಳಿದರೂ ಕಾಮಗಾರಿ ಮಾತ್ರ ನಡೆಯುವುದಿಲ್ಲ ಎಂದರು.
ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಡಿವೈಎಸ್‌ಪಿ ಎಚ್.ಡಿ.ಕುಲರ್ಣಿ, ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಪುರಸಭೆ ಮುಖ್ಯಾಧಿಕಾರಿ ಆನಂದ್ ಜೆ., ಕಂದಾಯ ನಿರೀಕ್ಷಕ ದಿನೇಶ್, ಸ್ಥಳೀಯರಾದ ರಾಜೇಶ್ ಕಡ್ಗಿಮನೆ, ಪುರಸಭೆ ಇಂಜಿನಿಯರ್ ಗುರುಪ್ರಸಾದ್ ಶೆಟ್ಟಿ, ರಾಘವೇಂದ್ರ ನಾಯ್ಕ ಹಾಜರಿದ್ದರು.