ಸಾಸ್ತಾನ ಪೇಟೆಯಲ್ಲಿ ಚರಂಡಿ ವ್ಯವಸ್ಥೆಗೆ ಕ್ರಮ

kota-2
Published on

ಕೋಟ: ಸಾಸ್ತಾನದ ಮಾಬುಕಳದಿಂದ ತೆಕ್ಕಟ್ಟೆವರೆಗಿನ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ಆಗುತ್ತಿರುವ ಅಪಘಾತ, ಸ್ಥಳೀಯ ಭಾಗದ ಚರಂಡಿ ಅವ್ಯವಸ್ಥೆ ಸೇರಿದಂತೆ ಸ್ಥಳೀಯವಾಗಿ ನಿರ್ಮಾಣಗೊಳ್ಳಬೇಕಿದ್ದ ಸರ್ವೀಸ್ ರಸ್ತೆ ಕುರಿತು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಮಂಗಳವಾರ ವಿವಿಧ ಭಾಗಗಳಲ್ಲಿ ಸಂಚರಿಸಿ ಪರಿಶೀಲಿಸಿದರು.

ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಕಾರ್ಯದರ್ಶಿ ಅಲ್ವಿನ್ ಆಂದ್ರಾದೆ ಮಾತನಾಡಿ, ಸಾಸ್ತಾನದ ಮಾಬುಕಳದಲ್ಲಿ ಮಳೆ ನೀರು ಹರಿಯಲು ಚರಂಡಿ ಹಾಗೂ ಸಾಸ್ತಾನ ಭಾಗದಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಮಾಡುವಂತೆ ಸಲಹೆ ನೀಡಿದರು.

ಡಿಸಿ ಸೂಚನೆ

ಸಾಸ್ತಾನದಿಂದ ಕೋಟ ಭಾಗದವರೆಗಿನ ಹೆದ್ದಾರಿ ಸಮಸ್ಯೆ ಆಲಿಸಿದ ಡಿಸಿ ವಿದ್ಯಾಕುಮಾರಿ, ಸಾಸ್ತಾನ ಮಾಬುಕಳ, ಸಾಸ್ತಾನ ಪೇಟೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯುವಂತೆ ಚರಂಡಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೇದ್ ಅವರಿಗೆ ಸೂಚಿಸಿದರು.

ಕೆಕೆಆರ್ ಕಂಪನಿಯ ಪ್ರಮುಖರಾದ ರೀತಮ್ ಗಂಗೂಲಿ, ತಿಮ್ಮಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್, ಡಿವೈಎಸ್‌ಪಿ ಪ್ರಭು ಡಿ.ಟಿ., ಕೋಟ ಠಾಣಾಧಿಕಾರಿ ರಾಘವೇಂದ್ರ, ಸಾಲಿಗ್ರಾಮ ಪ.ಪಂ. ಅಧ್ಯಕ್ಷೆ ಸುಕನ್ಯಾ ಶೆಟ್ಟಿ, ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್, ಸದಸ್ಯರಾದ ಸುಲತಾ ಹೆಗ್ಡೆ, ಕೋಟ ಕಂದಾಯ ಅಧಿಕಾರಿ ಮಂಜು ಬಿಲ್ಲವ, ಕೋಟ ಗ್ರಾಮ ಲೆಕ್ಕಿಗ ಚಲುವರಾಜು ಇದ್ದರು.

ಮೂರ್‌ಕೈ ನಲ್ಲಿ ಪ್ಲೈಓವರ್ ನಿರ್ಮಿಸಿ

ರಾಷ್ಟ್ರೀಯ ಹೆದ್ದಾರಿ ಕೋಟ ಮೂರ್‌ಕೈ ಭಾಗದಲ್ಲಿ ಕೋಟ ವಿವೇಕ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳ ಸಂಚಾರ ಹೆಚ್ಚಿದ್ದು, ಈ ಭಾಗದಲ್ಲಿ ಸಾಹೇಬರಕಟ್ಟೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಇದೆ. ಇಲ್ಲಿ ಪ್ಲೈಓವರ್ ನಿರ್ಮಿಸುವಂತೆ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮಸುಂದರ್ ನಾಯರಿ ಡಿಸಿ ಹಾಗೂ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಿದರು.

ಹೆದ್ದಾರಿ, ಸರ್ಕಲ್ ಸಮಸ್ಯೆ

ಸಾಲಿಗ್ರಾಮ ರಾ.ಹೆ. ಮಳೆಗಾಲದ ನೀರಿನಿಂದ ಸ್ಥಳೀಯ ನಿವಾಸಿಗಳಿಗೆ ಸಂಕಷ್ಟ ತಂದೊಡ್ಡುತ್ತಿದ್ದು ಈ ಬಗ್ಗೆ ಸಮರ್ಪಕ ಯೋಜನೆ ಸಿದ್ಧಪಡಿಸಿ ಸಮಸ್ಯೆ ಬಗೆಹರಿಸುವಂತೆ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಗಾಣಿಗ ಮನವಿ ಮಾಡಿದರು. ಕೋಟದ ಅಮೃತೇಶ್ವರಿ ಸರ್ಕಲ್ ಬಳಿ ಸಾಕಷ್ಟು ಅವಘಡಗಳು ಸಂಭವಿಸುತ್ತಿದ್ದು. ಜಾಗವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಪರ್ಯಾಯ ವ್ಯವಸ್ಥೆ ಬಗ್ಗೆ ಪ್ರಾಧಿಕಾರದ ಪ್ರಮುಖರೊಂದಿಗೆ ಚರ್ಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net