

ಕಿಕ್ಕೇರಿ: ಓದುವ ಮಕ್ಕಳ ಬದುಕು ಹಸನಾಗಲು ಮೊಬೈಲ್ ಬಿಡಿಸಿ ಪುಸ್ತಕ, ಪತ್ರಿಕೆ ಓದಿಸುವ ಅಭಿರುಚಿ ಮೂಡಿಸಬೇಕಿದೆ ಎಂದು ಮೈಸೂರಿನ ನಾರಾಯಣಾನಂದ ಆಶ್ರಮದ ಶ್ರೀ ನಿತ್ಯಾನಂದಪುರಿ ಸ್ವಾಮೀಜಿ ಹೇಳಿದರು.
ಹೋಬಳಿಯ ಮಾರ್ಗೋನಹಳ್ಳಿ ಗ್ರಾಮದಲ್ಲಿ ವಿವಿಧ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಬೆಂಗಳೂರಿನ ಅವಿರತ ಪ್ರತಿಷ್ಠಾನ ಶನಿವಾರ ಹಮ್ಮಿಕೊಂಡಿದ್ದ ಉಚಿತ ನೋಟ್‌ಪುಸ್ತಕ, ಪಠ್ಯಪರಿಕರ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯಾದ್ಯಂತ ಸರ್ಕಾರಿ ಕನ್ನಡ ಶಾಲೆ ಮಕ್ಕಳಿಗೆ ಲಾಪೇಕ್ಷೆ ಬಯಸದೆ ಸಂಸ್ಥೆ ನೀಡುತ್ತಿರುವ ನೆರವು ಮಾದರಿಯಾಗಿದೆ. 2009ರಲ್ಲಿ ಆರಂಭವಾದ ಸಂಸ್ಥೆ ನಿರಂತರವಾಗಿ ಸಂಸ್ಕಾರದ ಜತೆ ಮಕ್ಕಳ ಶೈಕಣಿಕ ಬದುಕಿಗೆ ಆಸರೆಯಾಗಿರುವಂತೆ ಉಳ್ಳವರು ನೆರವಾಗಬೇಕು ಎಂದರು.
ಕನ್ನಡದ ಶಾಲೆ, ಸರ್ಕಾರಿ ಶಾಲೆ ಉಳಿಯಲು ಪಾಲಕರು ಮುಂದಾಗಬೇಕಿದೆ. ಅವಿರತ ಸಂಸ್ಥೆ ಉತ್ಸಾಹಿ ಯುವ ಸಮೂಹವನ್ನು ಹೊಂದಿದೆ. ಇಂತಹ ಪ್ರೇರಣೆ ಗ್ರಾಮೀಣ ಪ್ರದೇಶದಲ್ಲಿಯೂ ಆಗಬೇಕಿದೆ. ನಿಮ್ಮೂರ ನಿಮ್ಮ ಶಾಲೆ ಉಳಿಯಲು ಇಂತಹ ಸಂಸ್ಥೆಯವರನ್ನು ಗೌರವಿಸುವ ಕೆಲಸ ಆಗಬೇಕಿದೆ ಎಂದು ಆಶಿಸಿದರು.
ಸಮಾಜ ತಿದ್ದುವ ಕೆಲಸಕ್ಕೆ ಗುರು ಬೇಕಿದೆ. ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗುರುಪರಂಪರೆಗೆ ವಿಶಿಷ್ಟ ಗೌರವವಿದೆ. ಮಕ್ಕಳಿಗೆ ಯೋಗ, ಧ್ಯಾನ, ಪ್ರಾಣಾಯಾಮ ನಿತ್ಯಪಾಠವಾಗಲು ಶಿಕ್ಷಕ ಸಮೂಹ ಮುಂದಾಗಲಿ. ಅಂಕದಷ್ಟೆ ಸಂಸ್ಕಾರ ಮುಖ್ಯವಿದೆ. ವೃದ್ಧರನ್ನು, ಹಿರಿಯರನ್ನು ಪೋಷಿಸುವ ಮನಸ್ಸು ದೂರವಾಗದಂತೆ ಮಕ್ಕಳಿಗೆ ನೀತಿ ಪಾಠ ರಚನಾತ್ಮಕವಾಗಿ ಇರಲಿ ಎಂದು ಹೇಳಿದರು.
ಅವಿರತ ಪ್ರತಿಷ್ಠಾನದ ಗುರುಪ್ರಸಾದ್ ಮಾತನಾಡಿ, ಸರಳ ಬದುಕು ಉತ್ತಮ ಆಲೋಚನೆ ಮೈಗೂಡಿಸಿಕೊಳ್ಳಿ. ಪ್ರಸಕ್ತ ಸಾಲಿನಲ್ಲಿ ರಾಜ್ಯದ 420 ಸರ್ಕಾರಿ ಶಾಲೆಯಲ್ಲಿ 2.6 ಲಕ್ಷ ನೋಟ್‌ಪುಸ್ತಕ ವಿತರಿಸಲಾಗಿದೆ. ಇತಿಹಾಸದ ಘಟನಾವಳಿಯಂತಹ ಉಪಯುಕ್ತ ಮಾಹಿತಿ ಪುಸ್ತಕಗಳಲ್ಲಿ ಮುದ್ರಿಸಲಾಗಿದೆ. ಮಕ್ಕಳಲ್ಲಿ ಓದುವ ಅಭಿರುಚಿ, ಓದುವಾಗ ಕಷ್ಟದ ಬದುಕು ಕಾಡದಿರಲಿ ಎಂದು ಸಂಸ್ಥೆ ಉಚಿತವಾಗಿ ಶೈಕ್ಷಣಿಕ ಪರಿಕರ ನೀಡುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಅವಿರತ ಸಂಸ್ಥೆಯ ಸುನೀಲ್, ಯುವರಾಜ್, ಸಿ.ಕೆ.ತಿಲಕ್, ಚಂದ್ರು, ಪದ್ಮ, ಶಿಕ್ಷಣ ಪ್ರೇಮಿ ಗದ್ದೆಹೊಸೂರು ಬಾಲಕೃಷ್ಣ, ಮುಖ್ಯಶಿಕ್ಷಕಿ ಸವಿತಾ, ಶಿಕ್ಷಕರಾದ ಕುಮಾರ್, ಮಹೇಂದ್ರ, ಜಯರಾಂ, ಜಯಪ್ಪ, ಭಾಗ್ಯಮ್ಮ, ರುಕ್ಮಿಣಿ ಕುಮಾರ್, ಮಹೇಂದ್ರ ಇತರರಿದ್ದರು.