ಸಾಂತೂರು ಬ್ರಹ್ಮಸ್ಥಾನದಲ್ಲಿ ಬಿಂಬ ಪ್ರತಿಷ್ಠಾಪನೆ

pdb-1
Published on

ಪಡುಬಿದ್ರಿ: ಸಮಗ್ರವಾಗಿ ಜೀರ್ಣೋದ್ಧಾರಗೊಂಡ ಸಾಂತೂರು ಶ್ರೀ ಆಲ್ ಉರಿನಾಗ ಬ್ರಹ್ಮಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ ಗರ್ಭಗೃಹದಲ್ಲಿ ಬ್ರಹ್ಮ, ನಾಗ, ರಕ್ತೇಶ್ವರಿ, ನಂದಿಗೋಣ, ಕ್ಷೇತ್ರಪಾಲ ಸಾನ್ನಿಧ್ಯಗಳ ಬಿಂಬ ಪ್ರತಿಷ್ಠಾಪನೆ ಭಾನುವಾರ ನೆರವೇರಿತು.

ಪ್ರಧಾನ ಅರ್ಚಕರಾದ ಸಾಂತೂರು ರಘುಪತಿ ಜೋಯಿಸ ಹಾಗೂ ಅನಂತ ಜೋಯಿಸರ ನೇತೃತ್ವದಲ್ಲಿ ಬೆಳಗ್ಗೆ ಪುಣ್ಯಾಹ ಪ್ರತಿಷ್ಠಾಹೋಮ, ಪ್ರತಿಷ್ಠಾಕಲಶ, ರತ್ನನ್ಯಾಸ ನಡೆದು ಉರಿಬ್ರಹ್ಮದೇವರ ಪ್ರತಿಷ್ಠಾಪನೆ, ಪರಿವಾರ ಶಕ್ತಿಗಳಾದ ನಾಗ, ರಕ್ತೇಶ್ವರಿ, ನಂದಿಗೋಣ, ಕ್ಷೇತ್ರಪಾಲ ಪ್ರತಿಷ್ಠಾಪನೆ, ಪ್ರತಿಷ್ಠಾಕಲಶಾಭಿಷೇಕ, ಪ್ರಾಯಶ್ಚಿತ್ತ ಪವಮಾನ ಹೋಮ, ಪಂಚಾಮೃತಾಭಿಷೇಕ, ಮಹಾಪೂಜೆ ನೆರವೇರಿತು. ಸಂಜೆ ಪಂಚಬ್ರಹ್ಮ ಮಂತ್ರಹೋಮ, ಭೂವರಾಹ ಶಾಂತಿ, ಕಲಶಮಂಡಲ ರಚನೆ, ಮಂಡಲಪೂಜೆ, ಭದ್ರಕಮಂಡಲ ಪೂಜೆ ಸಂಪನ್ನಗೊಂಡಿತು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ದಿವಾಕರ ಎಂ.ಶೆಟ್ಟಿ, ಸುನೀಲ್ ಜಯರಾಮ್ ಶೆಟ್ಟಿ, ಅಧ್ಯಕ್ಷ ಅಂಗಡಿಗುತ್ತು ಪ್ರಸಾದ್ ಎಂ.ಶೆಟ್ಟಿ, ಉಪಾಧ್ಯಕ್ಷ ಶಶಿಕುಮಾರ್ ಬಿ.ಶೆಟ್ಟಿ, ಕಾರ್ಯದರ್ಶಿ ಸುಜಿತ್ ಕೆ.ಶೆಟ್ಟಿ, ಕೋಶಾಧಿಕಾರಿ ಹರಿಣಾಕ್ಷ ಶೆಟ್ಟಿ, ರವೀಂದ್ರ ಪ್ರಭು ಸಾಂತೂರು, ವಿಶ್ವನಾಥ ಶೆಟ್ಟಿ, ಗಣೇಶ್ ಶೆಟ್ಟಿ, ಬಾಲಚಂದ್ರ ಶೆಟ್ಟಿ, ಪಿಲಾರು ಪರಾರಿ, ಸಾಂತೂರು ಪರಾರಿ, ಪಿಲಾರು ಮಜಲಬೆಟ್ಟು ಬೀಡು, ಪಿಲಾರು ತಂಬಿದಬೆಟ್ಟು, ಪಿಲಾರು ಕಂಕಣಗುತ್ತು, ಸಾಂತೂರು ಕುಂದಬೆಟ್ಟುಗುತ್ತು, ಸಾಂತೂರು ಸಾಮಾನಾಡಿಗುತ್ತು ಮನೆತನದ ಪ್ರಮುಖರು, ಸಾಂತೂರು ಪಿಲಾರು ಗ್ರಾಮಸ್ಥರು ಉಪಸ್ಥಿತರಿದ್ದರು.

9ರಿಂದ 18ರ ವರೆಗೆ ಗಡುವಾಡು ನೇಮೋತ್ಸವ

ಸಾಂತೂರು ಶ್ರೀ ಆಲ್ ಉರಿನಾಗಬ್ರಹ್ಮಸ್ಥಾನ ಅನಾದಿ ಕಾಲದಿಂದಲೂ ಊರ ಪರವೂರ ಭಕ್ತರಿಂದ ಆರಾಧನೆ ಪಡೆಯುತ್ತಾ ಬಂದಿರುವ ಕ್ಷೇತ್ರ. ಕ್ಷೇತ್ರದಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಗಡುಪಾಡು ನೇಮೋತ್ಸವವೇ ಈ ಎಲ್ಲ ಐತಿಹ್ಯಗಳಲ್ಲಿ ಅತ್ಯಂತ ಪ್ರಮುಖವಾದುದು ಮತ್ತು ಮಹತ್ವಪೂರ್ಣವಾದುದು. ಸುತ್ತಲಿನ ದೈವೀಕ್ಷೇತ್ರಗಳಾದ ಪಿಲಾರು ಪರಾರಿಯ ಉಲ್ಲಾಯ ಕೊಡಮಣಿತ್ತಾಯ ದೈವ, ಪಿಲಾರು ತಂಬಿದಬೆಟ್ಟುವಿನ ಶ್ರೀ ಧರ್ಮದೈವ ಜಾರಂದಾಯ, ಸಾಂತೂರು ಪರಾರಿ ಶ್ರೀ ಧೂಮಾವತಿ ದೈವ ಮತ್ತು ಸಾಂತೂರು ಕೊಡಂಗಲ ಗರಡಿಯ ಶ್ರೀ ಬ್ರಹ್ಮ ಬೈದರ್ಕಳ ಭಂಡಾರಗಳು ಸಾಂತೂರಿನ ಶ್ರೀ ಆಲ್ ಉರಿನಾಗಬ್ರಹ್ಮಸ್ಥಾನದ ಗಡುಪಾಡು ಜಾಗಕ್ಕೆ ಆಗಮಿಸಿ, ಒಂದು ವಾರದ ಪರ್ಯಂತ ನಡೆಯುವ ಗಡುಪಾಡು ನೇಮೋತ್ಸವ, ಬ್ರಹ್ಮದೇವರ ಬ್ರಹ್ಮಮಂಡಲ ಸೇವೆ ಮತ್ತು ಪಿಲಾರಿನಲ್ಲಿ ನಡೆಯುವ ಮಾರಿ ಗೊಂದೋಳು ತುಳುನಾಡಿನಲ್ಲಿಯೇ ಅತ್ಯಂತ ವಿಶಿಷ್ಟ ಜಾತ್ರೆ. ಕ್ಷೇತ್ರದಲ್ಲಿ ಏ.9ರಿಂದ 18ರವರೆಗೆ ಗಡುವಾಡು ನೇಮೋತ್ಸವ, ಬ್ರಹ್ಮಮಂಡಲ ಹಾಗೂ ಪಿಲಾರು ಬೇರ‌್ಗೊಳಿಯಲ್ಲಿ ಮಾರಿಗೋಂದೋಳು ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net