

ನವದೆಹಲಿ: ಅತಿಥಿ ದೇವೋ ಭವ ಅಂತಾರೆ ಆದರೆ, ಈ ಮಾತಿಗೆ ಕಳಂಕ ತರುವ ಕೆಲಸವನ್ನು ಇಲ್ಲೊಬ್ಬ ಇನ್ಸ್ಟಾಗ್ರಾಂ ಬಳಕೆದಾರ ಮಾಡಿದ್ದಾನೆ. ವಿದೇಶದಿಂದ ಭಾರತಕ್ಕೆ ಬರುವ ಮಹಿಳಾ ಪ್ರವಾಸಿಗರ ಜತೆ ರೀಲ್ಸ್ ಮಾಡುವುದಲ್ಲದೆ, ಅವರಿಗೆ ದರ ನಿಗದಿ ಮಾಡುವ ಮೂಲಕ ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಹಿಳಾ ಪ್ರವಾಸಿಗರಿಗೆ ಕಿರುಕುಳ ನೀಡಿರುವ ಸಾಕಷ್ಟು ವಿಡಿಯೋಗಳನ್ನು @guru__brand0000 ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಆರೋಪಿ ಯುವಕ ಪೋಸ್ಟ್ ಮಾಡಿದ್ದಾನೆ. ಕೆಲವೊಂದು ವಿಡಿಯೋಗಳಂತೂ ತೀರಾ ಕಳಪೆಯಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಳ್ಳುವ ದುರಾಸೆಯಿಂದ ಈ ದುಷ್ಕೃತ್ಯ ಎಸಗುತ್ತಿದ್ದು, ಅವನ ವಿರುದ್ಧ ಕಠಿಣ ಕ್ರಮಕ್ಕೆ ನೆಟ್ಟಿಗರು ಆಗ್ರಹಿಸಿದ್ದಾರೆ.
ಈ ವಿಚಾರವನ್ನು ಎಕ್ಸ್ ಬಳಕೆದಾರರೊಬ್ಬರು ಬೆಳಕಿಗೆ ತಂದಿದ್ದು, ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಭಾರತದಲ್ಲಿ ಕೆಟ್ಟ ಅನುಭವವಾಗಲು ಇಂತಹ ಹುಡುಗರೇ ಕಾರಣ. ಪ್ರವಾಸಿಗರಿಗೆ ಕಿರುಕುಳ ನೀಡುತ್ತಿರುವ ಈ ಯುವಕನನ್ನು ಜೈಪುರ್ ಪೊಲೀಸರು ಕೂಡಲೇ ಬಂಧಿಸಿ, ಮೂಲಭೂತ ನಾಗರಿಕ ಪ್ರಜ್ಞೆ ಮತ್ತು ಅತಿಥಿ ದೇವೋ ಭವ ಎಂಬುದರ ಅರ್ಥವನ್ನು ತಿಳಿಸಿ ಎಂದಿದ್ದಾರೆ.
ವಿಡಿಯೋದಲ್ಲಿರುವ ಯುವಕನ ಹೆಸರು ಗುರು. ಆತ ನಾಲ್ವರು ವಿದೇಶಿ ಮಹಿಳಾ ಪ್ರವಾಸಿಗರ ಬಳಿಗೆ ಹೋಗಿ, ನಾಚಿಕೆ ಬಿಟ್ಟು ಅವರ ದರಗಳನ್ನು ನಿರ್ಧರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ನೀವು ಈ ಮಹಿಳೆಯರನ್ನು 150 ರೂಪಾಯಿಗೆ ಪಡೆಯಬಹುದು ಎಂದು ಹೇಳಿದ್ದಾನೆ. ಅಲ್ಲದೆ, ಪ್ರತಿಯೊಬ್ಬ ಮಹಿಳೆಯ ಕಡೆ ಕೈ ತೋರಿಸಿ, ಈಕೆಯನ್ನು 150 ರೂಪಾಯಿಗೆ, ಈಕೆ 200 ರೂ., ಈಕೆಗೆ 500 ರೂ. ಮತ್ತು ಈಕೆಯನ್ನು 300 ರೂ. ಕೊಟ್ಟು ಪಡೆಯಬಹುದು ಎಂದು ಹೇಳಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ. ಗುರು ಏನು ಹೇಳುತ್ತಿದ್ದಾನೆ ಎಂಬುದು ಮಹಿಳೆಯರಿಗೆ ತಿಳಿಯದೇ ಆತನ ಕ್ಯಾಮೆರಾದತ್ತ ಕೈ ಬೀಸುತ್ತಲೇ ಇರುವುದು ವಿಡಿಯೋದಲ್ಲಿದೆ.
ಗುರುವಿನ ಇನ್ಸ್ಟಾಗ್ರಾಂ ಪ್ರೊಫೈಲ್‌ನಲ್ಲಿ ನೋಡಿದರೆ, ರೀಲ್‌ಗಳ ಸಲುವಾಗಿ ಜೈಪುರದಲ್ಲಿ ಪ್ರವಾಸಿಗರಿಗೆ ಕಿರುಕುಳ ನೀಡುತ್ತಿರುವುದು ಸ್ಪಷ್ಟವಾಗಿದೆ. ಇದಿಷ್ಟೇ ಅಲ್ಲದೆ ಬೈಕ್ ಸ್ಟಂಟ್ ಮಾಡುವ ರೀಲ್ಗಳನ್ನೂ ಸಹ ಗುರು ಪೋಸ್ಟ್ ಮಾಡಿದ್ದಾನೆ. ಎಕ್ಸ್ ಬಳಕೆದಾರರು ಗುರುವಿನ ವಿಡಿಯೋಗಳನ್ನು ಪೋಸ್ಟ್ ಮಾಡಿ, ಜೈಪುರ ಪೊಲೀಸರನ್ನು ಟ್ಯಾಗ್ ಮಾಡುವ ಮೂಲಕ ಆತನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ವಿದೇಶಿ ಪ್ರವಾಸಿಗರಿಗೆ ಕಿರುಕುಳ ನೀಡುವ ಮೂಲಕ ಈ ಯುವಕ ಜೈಪುರದ ಹೆಸರನ್ನು ಹಾಳುಮಾಡುತ್ತಿದ್ದಾನೆ ಎಂದು ಅನೇಕ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಜೈಪುರ ಪೊಲೀಸರು, ಮೇಲೆ ತಿಳಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮಕ್ಕಾಗಿ ಉನ್ನತ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. (ಏಜೆನ್ಸೀಸ್)