ಡಿಎಸ್​ಪಿ ಆಗಿದ್ದವರು ಈಗ ಕಾನ್ಸ್​ಟೆಬಲ್!​ ಮಹಿಳಾ ಪೇದೆ ಜತೆ ಬೆತ್ತಲಾಗಿ ಸಿಕ್ಕಿಬಿದ್ದ ಪೊಲೀಸ್​ ಅಧಿಕಾರಿಗೆ ಹಿಂಬಡ್ತಿ

DSP to Constable
Published on

ಲಖನೌ: ಸಮಾಜದಲ್ಲಿ ವಿವಾಹೇತರ ಸಂಬಂಧಗಳು ಸಾಮಾನ್ಯವಾಗಿವೆ. ಕ್ಷಣಿಕ ಸುಖಕ್ಕಾಗಿ ತಮ್ಮ ಜೀವನದ ಜೊತೆಗೆ ಬೇರೆಯವರ ಸಂಸಾರವು ಹಾಳಾಗುತ್ತಿದೆ. ಇಂತಹ ವಿವಾಹೇತರ ಸಂಬಂಧಗಳಿಗೆ ಕೈ ಹಾಕುವವರಲ್ಲಿ ಜನ ಸಾಮಾನ್ಯರಷ್ಟೇ ಅಲ್ಲ ಉನ್ನತ ಉದ್ಯೋಗದಲ್ಲಿರುವವರು ಕೂಡ ಇದ್ದಾರೆ. ಕೆಲ ಸರ್ಕಾರಿ ನೌಕರರೂ ಕೂಡ ಇದರಿಂದ ಹೊರತಾಗಿಲ್ಲ. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಸರ್ಕಾರ ವಿವಾಹೇತರ ಸಂಬಂಧದ ಪ್ರಕರಣದಲ್ಲಿ ಸಂಚಲನ ಮೂಡಿಸುವ ನಿರ್ಧಾರವನ್ನು ಕೈಗೊಂಡಿದೆ.

ಸಹೋದ್ಯೋಗಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಡಿಎಸ್​ಪಿಯನ್ನು ಕಾನ್‌ಸ್ಟೆಬಲ್ ಹುದ್ದೆಗೆ ಹಿಂಬಡ್ತಿ ನೀಡಲಾಗಿದೆ. ಡಿಎಸ್​ಪಿ ಕೃಪಾ ಶಂಕರ್ ಕನೌಜಿಯ ಅವರು ಮೂರು ವರ್ಷಗಳ ಹಿಂದೆ ಮಹಿಳಾ ಪೇದೆಯೊಂದಿಗೆ ಹೋಟೆಲ್‌ನಲ್ಲಿ ಬೆತ್ತಲಾಗಿ ಸಿಕ್ಕಿಬಿದ್ದಿದ್ದರು. ಶಿಸ್ತು ಕ್ರಮದ ಹಿನ್ನೆಲೆಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ.

ಪತ್ನಿಗೆ ವಂಚನೆ ಹಾಗೂ ಬೇರೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಬೆಳೆಸಿದ ಅಪರಾಧಕ್ಕಾಗಿ ಡಿಎಸ್​ಪಿಯನ್ನು ಕಾನ್​ಸ್ಟೆಬಲ್ ದರ್ಜೆಗೆ ಇಳಿಸಲು ಪೊಲೀಸ್ ಇಲಾಖೆ ನಿರ್ಧಾರ ಮಾಡಿದೆ. ಇದೀಗ ಈ ನಿರ್ಧಾರ ಭಾರಿ ಸಂಚಲನ ಮೂಡಿಸಿದೆ. ಕೃಪಾ ಶಂಕರ್ ಕನೌಜಿಯಾ ಅವರು ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಕಾನ್​ಸ್ಟೆಬಲ್​ ಹುದ್ದೆಯಿಂದ ಹಂತ ಹಂತವಾಗಿ ಡಿಎಸ್​ಪಿ ಹುದ್ದೆಗೆ ಏರಿದ್ದರು. ಆದರೆ, ಮೂರು ವರ್ಷಗಳ ಹಿಂದೆ ಮಹಿಳೆಯೊಂದಿಗಿನ ವಿವಾಹೇತರ ಸಂಬಂಧದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.

ಈ ಘಟನೆಯ ವೇಳೆ ಕನೌಜಿಯ ಅವರು ಉನ್ನಾವೋದಲ್ಲಿ ವೃತ್ತ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದರು. ವೈಯಕ್ತಿಕ ಕಾರಣ ನೀಡಿ ಎಸ್ಪಿಯಿಂದ ರಜೆ ಪಡೆದ ಕನೌಜಿಯಾ, ಮನೆಗೆ ಹೋಗುವ ಬದಲು ಕಾನ್ಪುರದ ಹೊಟೇಲ್‌ಗೆ ಮಹಿಳಾ ಕಾನ್‌ಸ್ಟೆಬಲ್‌ ಜತೆ ತೆರಳಿದ್ದರು. ಈ ವೇಳೆ ತಮ್ಮ ಅಧಿಕೃತ ಮತ್ತು ವೈಯಕ್ತಿಕ ಫೋನ್​ಗಳನ್ನು ಸ್ವಿಚ್​ ಆಫ್​ ಮಾಡಿದ್ದರು.

ಕನೌಜಿಯಾ ಅವರ ಫೋನ್ ಲಭ್ಯವಾಗದ ಕಾರಣ, ಅವರ ಪತ್ನಿ ಉನ್ನಾವೋ ಎಸ್ಪಿಯನ್ನು ಸಂಪರ್ಕಿಸಿದ್ದರು. ತಕ್ಷಣ ಎಚ್ಚೆತ್ತ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದರು. ಕಾನ್ಪುರದ ಹೋಟೆಲ್‌ನಲ್ಲಿ ಕನೌಜಿಯಾ ಅವರ ಫೋನ್ ಕೊನೆಯದಾಗಿ ಆ್ಯಕ್ಟೀವ್​ ಆಗಿರುವುದನ್ನು ಕಂಡುಕೊಂಡರು. ಕೂಡಲೇ ಅಲ್ಲಿಗೆ ತಲುಪಿದ ಪೊಲೀಸರು ಕನೌಜಿಯಾ ಹಾಗೂ ಆತನ ಜತೆಗಿದ್ದ ಮಹಿಳಾ ಪೇದೆಯನ್ನು ಬಂಧಿಸಿದರು.

ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಅಂದಿನ ಲಖನೌ ರೇಂಜ್ ಐಜಿಪಿ ತನಿಖೆಗೆ ಆದೇಶಿಸಿದ್ದರು. ಅಶಿಸ್ತಿನ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡಲಾಗಿತ್ತು. ಈ ಘಟನೆಯ ತನಿಖೆಯನ್ನು ಇತ್ತೀಚೆಗೆ ಪೂರ್ಣಗೊಳಿಸಿದ ಪೊಲೀಸರು, ಕನೌಜಿಯಾ ಅವರನ್ನು ಗೋರಖ್‌ಪುರ ಬೆಟಾಲಿಯನ್‌ನ ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿಯಲ್ಲಿ ಕಾನ್‌ಸ್ಟೆಬಲ್ ಆಗಿ ಹಿಂಬಡ್ತಿ ನೀಡಲಾಗಿದೆ. ಯುಪಿ ಪೊಲೀಸ್ ಅಧಿಕಾರಿಗಳ ಈ ನಿರ್ಧಾರ ಇದೀಗ ಸಂಚಲನ ಮೂಡಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net