

ಮೂಡುಬಿದಿರೆ: ಬಸದಿ, ದೇವಾಲಯದ ಅರ್ಚಕರು, ಸಹಾಯಕರು, ಆಡಳಿತ ಮಂದಿಗೆ ಸರ್ಕಾರ ಅರೆಕಾಲಿಕ ಸಂಬಳ ನೀಡಿ ದಿನವಿಡೀ ದುಡಿಯುವಂತೆ ಮಾಡಿದೆ. ಇದರಿಂದಾಗಿ ಅವುಗಳ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಲು ಸಾಧ್ಯ ಇಲ್ಲ. ಬಸದಿ, ದೇವಾಲಯಗಳು ಉಂಬಳಿಯ ಪ್ರದೇಶಗಳನ್ನು ಕಳೆದುಕೊಂಡು ಕಷ್ಟಕರ ಪರಿಸ್ಥಿತಿಯಲ್ಲಿವೆ. ಪೂಜಾಗೃಹಗಳು ಸದಾ ತೆರೆದಿದ್ದು, ಭಕ್ತರಿಗೆ ಭಗವಂತನ ದರುಶನ ದೊರಕುವಂತೆ ಸರ್ಕಾರ ತಸ್ತೀಕು ಹೆಚ್ಚಿಸಬೇಕೆಂದು ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮೂಡುಬಿದಿರೆ ಧವಲತ್ರಯ ಟ್ರಸ್ಟ್ ಜೈನ ಮಠದ ಭಟ್ಟಾರಕ ಭವನದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸೌಲಭ್ಯಗಳ ಮಾಹಿತಿ ಶಿಬಿರ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ ಕುಮಾರ್ ಮಾಹಿತಿ ನೀಡಿ, ಬಸದಿ, ದೇವಾಲಯದ, ಅರ್ಚಕರ, ಸಹಾಯಕ ದಾಖಲೆಗಳು ಸಮರ್ಪಕವಾಗಿ ಇದ್ದರೆ ಸರ್ಕಾರದ ಅನುದಾನ ಸಿಗುತ್ತದೆ. ಪ್ರತಿ ಹೋಬಳಿ, ತಾಲೂಕುಮಟ್ಟಕ್ಕೆ ಒಂದು ಸಮುದಾಯ ಭವನ, ಬಸದಿ ಪುನಃ ನವೀಕರಣ, ಕಾಂಪೌಂಡ್ ನಿರ್ಮಾಣ, ಅಲ್ಪಸಂಖ್ಯಾತರ ಮಕ್ಕಳ ವಿದ್ಯಾಭ್ಯಾಸ, ಅನಾಥಾಶ್ರಮ, ವೃದ್ಧಾಶ್ರಮ, ಅಂಗವಿಕಲರ ಕಲ್ಯಾಣ, ತರಬೇತಿ ಇತ್ಯಾದಿ ಹಲವಾರು ಯೋಜನೆಗಳಿವೆ ಎಂದರು.
ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯೆ ಪರಿಮಳ ಜೈನ್ ಬೆಳುವಾಯಿ ನಡ್ಯೋಡಿ ಗುತ್ತು, ಕಲ್ಯಾಣ ಅಭಿವೃದ್ಧಿ ಇಲಾಖೆಯ ರವೂಫ್ ಉಪಸ್ಥಿತರಿದ್ದರು.
ಧರ್ಮಸ್ಥಳದ ಜಯ ಕೀರ್ತಿ ಜೈನ್ ಸ್ವಾಗತಿಸಿದರು. ಜೈನ ಮಠದ ಸಲಹಾ ಸಮಿತಿ ಅಧ್ಯಕ್ಷ ಬಾಹುಬಲಿ ಪ್ರಸಾದ್ ವಂದಿಸಿದರು.ಶಿಕ್ಷಕಿ ಸೌಮ್ಯಾ ನಿರೂಪಿಸಿದರು.