

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಸಾಂಕ್ರಾಮಿಕ ರೋಗಗಳು ಸಮಾಜದ ಸ್ವಾಸ್ಥೃ ಹಾಳು ಮಾಡುತ್ತವೆ. ಇವುಗಳಿಂದ ಮುಕ್ತರಾಗಲು ವೈಯಕ್ತಿಕ ಸ್ವಚ್ಛತೆ ಕಾಪಾಡುವುದು ಮುಖ್ಯ ಎಂದು ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಯಂತಿ ಹೇಳಿದರು.
ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯ ಇಕೋ ಕ್ಲಬ್, ಜೂನಿಯರ್ ರೆಡ್‌ಕ್ರಾಸ್ ಘಟಕ ಹಾಗೂ ಆರೋಗ್ಯ ಕೂಟದ ಆಶ್ರಯದಲ್ಲಿ ಸೋಮವಾರ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಾಂಕ್ರಾಮಿಕ ರೋಗಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ದೇಹ ಸ್ವಚ್ಛವಾಗಿ ಇಟ್ಟುಕೊಳ್ಳುವ ಜತೆಗೆ ಮನೆ, ಸುತ್ತಲಿನ ಪರಿಸರ ಸ್ವಚ್ಛವಾಗಿ ಇರುವಂತೆ ನೋಡಿಕೊಳ್ಳಬೇಕು. ಜೂನ್‌ನಲ್ಲಿ ಹಲವಾರು ಸಾಂಕ್ರಾಮಿಕ ರೋಗಗಳು ಹರಡುವುದರಿಂದ ಶುದ್ಧ ನೀರು ಕುಡಿಯುವ ಜತೆಗೆ ಸೊಳ್ಳೆ, ಕ್ರಿಮಿಕೀಟಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು, ಆಹಾರ ಪದಾರ್ಥಗಳನ್ನು ಶೇಖರಿಸಿಡುವಾಗ ಅವುಗಳನ್ನು ಮುಚ್ಚುವ ಮೂಲಕ ಸಂಪೂರ್ಣ ಸ್ವಚ್ಛತೆ ಕಾಪಾಡಲು ಮುಂದಾಗಬೇಕು ಎಂದರು.
ಮುಖ್ಯಶಿಕ್ಷಕಿ ಉಷಾಲತಾ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಶುಭ ಪ್ರಕಾಶ್, ಶಿಕ್ಷಕರಾದ ಕೃಷ್ಣ ಶಾಸ್ತ್ರೀ, ಕುಮುದಾ, ಸ್ಮಿತಾ ಮುಂತಾದವರು ಉಪಸ್ಥಿತರಿದ್ದರು. ಜೂನಿಯರ್ ರೆಡ್‌ಕ್ರಾಸ್ ಘಟಕದ ಸಂಯೋಜಕ ತ್ಯಾಗಮ್ ಹರೇಕಳ ಸ್ವಾಗತಿಸಿದರು. ಶಿಕ್ಷಕಿ ಮೋಹಿನಿ ವಂದಿಸಿದರು. ಶಿವಣ್ಣ ಕಾರ್ಯಕ್ರಮ ನಿರೂಪಿಸಿದರು.