INDVsEng ODI; ಟೀಮ್​ ಇಂಡಿಯಾಗೆ ಬಿಗ್​ ಶಾಕ್​!: ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಯಿಂದ ಬುಮ್ರಾ ಔಟ್​?

dk (75) (1)
Published on

INDVsEng ODI: ಇದೇ ಫೆ. 6ರಿಂದ ನಡೆಯಲಿರುವ ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಯಿಂದ ಫಾಸ್ಟ್​ ಬೌಲರ್ ಜಸ್ಪ್ರೀತ್​ ಬುಮ್ರಾ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.

ಹೌದು, ಫೆ.4ರಂದು(ಇಂದು) ಬಿಸಿಸಿಐ ಪ್ರಕಟಿಸಿದ ​ಏಕದಿನ ಸರಣಿಯ ಪಟ್ಟಿಯಲ್ಲಿ ಬುಮ್ರಾ ಹೆಸರಿಲ್ಲ. ಇದೀಗ ಅವರ ಫಿಟ್ನೇಸ್​ ಬಗ್ಗೆ ಅತಂಕ ಹೆಚ್ಚಾದ ಬೆನ್ನಲ್ಲೇ ಬುಮ್ರಾ ಅವರ ಅನುಪಸ್ಥಿತಿಯನ್ನು ಕ್ರಿಕೆಟ್​ ಮಂಡಳಿ ಅಧಿಕೃತವಾಗಿ ಧೃಢಪಡಿಸಿಲ್ಲವಾದರೂ, ಸರಣಿಯಿಂದ ಹೊರ ನಡೆಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ವರದಿಗಳು ಉಲ್ಲೇಖಿಸಿವೆ.

ಜನವರಿಯಲ್ಲಿ ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಯ ತಂಡದ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅರ್ಗಕರ್, ಬುಮ್ರಾ ಮೊದಲೆರಡು ಪಂದ್ಯಗಳಿಗೆ ಮಾತ್ರ ಗೈರಾಗಲಿದ್ದಾರೆ ಎಂದು ಹೇಳಿದ್ದರು. ಅವರ ಫಿಟ್ನೇಸ್​ ಕುರಿತು ವೈದ್ಯರ ಹೇಳಿಕೆ ಆಧಾರದ ಮೇಲೆ ಮುಂದಿನ ಆಯ್ಕೆ ಬಗ್ಗೆ ತಿಳಿಸಲಾಗುವುದು ಎಂದು ಹೇಳಿದ್ದರು. ಆದರೀಗ ಫಿಟ್ನೇಸ್​ ಬಗ್ಗೆ ಅತಂಕ ಹೆಚ್ಚಾದ ಹಿನ್ನೆಲೆ ಸರಣಿಯಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ.

ಸಿಡ್ನಿಯಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ವೇಳೆ ಬುಮ್ರಾ ಬೆನ್ನಿನ ಗಾಯಕ್ಕೆ ಒಳಗಾದರು. ಟೆಸ್ಟ್ ಪಂದ್ಯದ ಮಧ್ಯದಲ್ಲಿ ಸ್ಕ್ಯಾನ್‌ಗೆ ಒಳಗಾದ ನಂತರ ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ದೀರ್ಘ ವಿಶ್ರಾಂತಿ ಬಗ್ಗೆ ವೈದ್ಯರು ಸಲಹೆ ನೀಡಿದ್ದರು.(ಏಜೆನ್ಸೀಸ್​) ​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net