

ಚಿಕ್ಕಮಗಳೂರು: 'ಬೆಂಗಳೂರಿನ ಡ್ರಗ್ಸ್ ಜಾಲ ಬಯಲಿಗೆಳೆಯಲು ಸಹಕರಿಸುವುದಾದರೆ ಚಲನಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ಪೊಲೀಸ್ ಇಲಾಖೆ ಎಲ್ಲ ರೀತಿಯ ರಕ್ಷಣೆ ನೀಡಲಿದೆ' ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.
'ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ. ನನಗೆ ಸರ್ಕಾರ ಸೂಕ್ತ ರಕ್ಷಣೆ ಕೊಟ್ಟರೆ ಇನ್ನಷ್ಟು ಸತ್ಯಗಳನ್ನು ಹೇಳುತ್ತೇನೆ' ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದರು. ಇದು ಇಡೀ ರಾಜ್ಯದಲ್ಲೇ ಭಾರೀ ಸಂಚಲನ ಮೂಡಿಸಿದ್ದು, ಚಂದನವನದತ್ತ ಎಲ್ಲರ ಕಣ್ಣು ದಿಟ್ಟಿಸಿದೆ. ಈ ಸಂದರ್ಭದಲ್ಲಿ ಇಂದ್ರಜಿತ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಸಿ.ಟಿ. ರವಿ, 'ಈ ವಿಚಾರದಲ್ಲಿ ಅವರಿಗೆ ಯಾರ ಬಗ್ಗೆಯೂ ಭಯ ಬೇಡ. ಪೊಲೀಸ್ ಇಲಾಖೆ ಅವರ ರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಿದ್ದು ಅವರು ಮುಕ್ತವಾಗಿ ಹೇಳಬೇಕು' ಎಂದರು. ಇದನ್ನೂ ಓದಿರಿ ಶವ ಪರೀಕ್ಷೆ ಯಾಕೆ ಮಾಡ್ಲಿಲ್ಲ?: ಇಂದ್ರಜಿತ್ ಆರೋಪಕ್ಕೆ ತಿರುಗೇಟುಕೊಟ್ಟ ಚಿರು ಮಾವ
'ಡ್ರಗ್ಸ್ ಪ್ರಕರಣದಲ್ಲಿ ಆಗಾಗ ಸಹನಟರು ಸಿಕ್ಕಿಬೀಳುತ್ತಿದ್ದರು. ಈಗ ನಾಯಕ ನಟರ ಹೆಸರೇ ಕೇಳಿಬರುತ್ತಿದೆ. ಇದೊಂದು ವ್ಯವಸ್ಥಿತವಾದ ಅಂತಾರಾಷ್ಟ್ರೀಯ ಮತ್ತು ಅಂತಾರಾಜ್ಯ ಜಾಲವಾಗಿದೆ. ಇದನ್ನು ಬಗ್ಗುಬಡಿದು ಇನ್ನಷ್ಟು ಜನ ಬಲಿಯಾಗುವುದನ್ನು ತಪ್ಪಿಸಲು ಇಂದ್ರಜಿತ್ ಲಂಕೇಶ್ ಅವರ ಸಹಕಾರ ಅಗತ್ಯವಿದೆ. ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಯುತ್ತಿದ್ದು, ವ್ಯಸನಕ್ಕೆ ಒಳಗಾದವರು ಯಾರು? ವ್ಯಾಪಾರಿಗಳು ಯಾರು? ಎನ್ನುವುದು ತನಿಖೆ ಬಳಿಕ ತಿಳಿಯಲಿದೆ' ಎಂದು ಸಿ.ಟಿ. ರವಿ ಹೇಳಿದರು.
ರಾಜ್ಯದಲ್ಲಿನ ಡ್ರಗ್ಸ್ ಮಾಫಿಯಾ ಕುರಿತು ಮಾತನಾಡಿರುವ ಗೃಹ ಸಚಿವ ಬಸವರಾಜು ಬೊಮ್ಮಾಯಿ, ಡ್ರಗ್ಸ್ ಪೆಡ್ಲರ್ಗಳ ವಿರುದ್ಧ ಸಮರ ಸಾರಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಡ್ರಗ್ಸ್ ಮಾಫಿಯಾವನ್ನು ಕಿತ್ತೊಗೆಯಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ ಎಂದಿದ್ದಾರೆ.