

ಮೂಡುಬಿದಿರೆ: ಶಿಕ್ಷಣದಿಂದ ವ್ಯಕ್ತಿ ಹಾಗೂ ವ್ಯಕ್ತಿತ್ವ ನಿಮಾರ್ಣ ಸಾಧ್ಯ. ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹತ್ವದ ಕೊಡುಗೆ ನೀಡುತ್ತಾ ಬಂದಿರುವ ಇಂಜಿನಿಯರಿಂಗ್ ಕ್ಷೇತ್ರ, ಆವಿಷ್ಕಾರಕ್ಕೆ ಮಾತ್ರ ಸೀಮಿತವಾಗದೆ, ಒಬ್ಬ ಅದ್ಭುತ ಶಿಕ್ಷಕನನ್ನು ರೂಪಿಸುವ ಕೆಲಸವಾಗಬೇಕಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.
ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಆಳ್ವಾಸ್ ಆಗಮನ 2024 ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಳ್ವಾಸ್ ಪದವಿ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ಪಿ.ನಾರಾಯಣ ಶೆಟ್ಟಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಎದುರಿಸುವ ಹಲವಾರು ಸವಾಲುಗಳಾದ ಭಾಷೆಯ ಮೇಲೆ ಹಿಡಿತ, ಗುಂಪಿನಲ್ಲಿ ಕಾರ್ಯನಿರ್ವಹಿಸುವ ಕಲೆ, ಮಾಡುವ ಪ್ರತಿ ಕಾರ್ಯದಲ್ಲಿ ಸ್ವ&ನಂಬಿಕೆ, ಗುರಿ ಸಾಧಿಸುವ ಕಡೆಗಿರುವ ಸ್ಪಷ್ಟತೆಯ ಕುರಿತು ತಿಳಿಸಿದರು.
ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿದರು.
ಕಾಲೇಜಿನ ಇಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫಮೇರ್ಷನ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ 6 ವಿದ್ಯಾರ್ಥಿಗಳು ಸೇರಿಕೊಂಡು ವಿದ್ಯಾರ್ಥಿಗಳ ಹಾಜರಾತಿಯನ್ನು ಡಿಜಿಟಲೀಕರಣದ ಮೂಲಕ ಸುರಕ್ಷಿತವಾಗಿ ನಿರ್ವಹಿಸುವ ಸಲುವಾಗಿ ಅಭಿವೃದ್ಧಿ ಪಡಿಸಿದ ಸ್ಟೂಡೆಂಟ್ಸ್ ಬಯೊಮೆಟ್ರಿಕ್ಸ್ ಅನಾವರಣಗೊಳಿಸಲಾಯಿತು.
ಪ್ರೊ.ಪಿ.ಎಲ್.ಧರ್ಮ ಅವರನ್ನು ಆಳ್ವಾಸ್ ಸಂಸ್ಥೆ ವತಿಯಿಂದ ಗೌರವಿಸಲಾಯಿತು.ಭಾರತೀಯ ವಿಜ್ಞಾನ ಸಂಸ್ಥೆ ಡಾ.ಟಿ.ವಿ.ರಾಮಚಂದ್ರ, ಕಾಲೇಜಿನ ಹಿರಿಯ ವಿದ್ಯಾರ್ಥಿ, ಉದ್ಯಮಿ ಪ್ರಶಿಲ್ ಶೆಟ್ಟಿ, ವಿವಿಧ ವಿಭಾಗಗಳ ಡೀನ್ ಹಾಗೂ ಮುಖ್ಯಸ್ಥರು ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ಪೀಟರ್ ಫರ್ನಾಂಡಿಸ್ ಕಾಲೇಜಿನ ಶೈಕ್ಷಣಿಕ ವರದಿ ವಾಚಿಸಿದರು. ಡೀನ್ ಅಕಾಡೆಮಿಕ್ಸ್ ದಿವಾಕರ್ ಶೆಟ್ಟಿ ಸ್ವಾಗತಿಸಿದರು. ಡಾ.ಸಾಕ್ಷಿ ಎಸ್.ಕಾಮತ್ ನಿರೂಪಿಸಿದರು. ಡಾ.ರಾಮ್ ಪ್ರಸಾದ್ ಅತಿಥಿಯನ್ನು ಪರಿಚಯಿಸಿದರು. ಡಾ.ರವಿಕುಮಾರ್ ವಂದಿಸಿದರು.