

ಮುಂಬೈ: ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿಬೇಕಿದ್ದ ಭಾರೀ ಅನಾಹುತ ತಪ್ಪಿದೆ. ನೂರಾರು ಪ್ರಯಾಣಿಕರ ಪ್ರಾಣ ಉಳಿದಿದೆ. ರನ್ವೇಯಲ್ಲಿ ಇಂಡಿಗೋ ವಿಮಾನ ಲ್ಯಾಂಡಿಂಗ್ ಆಗುತ್ತಿರುವ ಸಮಯದಲ್ಲೇ ಅದೇ ರನ್ವೇಯಿಂದ ಏರ್ ಇಂಡಿಯಾ ವಿಮಾನ ಟೇಕಾಫ್ ಆಗಿದೆ. ರನ್ ವೇಯಲ್ಲಿ ಎರಡು ವಿಮಾನಗಳು ಒಂದಕ್ಕೊಂದು ತೀರಾ ಸಮೀಪ ಇರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ ಸ್ಪಷ್ಱವಾಗಿ ಕಾಣುತ್ತಿದೆ.
ಏರ್ ಇಂಡಿಯಾ ಫ್ಲೈಟ್ 657 ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (TRV) ಟೇಕಾಫ್ ಪ್ರಕ್ರಿಯೆಯಲ್ಲಿದ್ದ ಕಾರಣ, ದೇವಿ ಅಹಲ್ಯಾಬಾಯಿ ಹೋಳ್ಕರ್ ವಿಮಾನ ನಿಲ್ದಾಣದಿಂದ (IDR) ಬಂದಿದ್ದ ಇಂಡಿಗೋ ಫ್ಲೈಟ್ 6E 5053 ರನ್‌ವೇ 27ರಲ್ಲಿ ಇಳಿಯಿತು. ಈ ಘಟನೆ ಏರ್ಬಸ್ A320neos ನಲ್ಲಿ ನಡೆದಿದೆ.
ಇಂದೋರ್‌ನಿಂದ ಇಂಡಿಗೋ ಫ್ಲೈಟ್ 6E 5053ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್ (ATC)ನಿಂದ ಲ್ಯಾಂಡಿಂಗ್ ಕ್ಲಿಯರೆನ್ಸ್ ನೀಡಲಾಯಿತು. ATC ಸೂಚನೆಗಳನ್ನು ಅನುಸರಿಸಿ ಪೈಲಟ್ ಲ್ಯಾಂಡಿಂಗ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್ ಆಗುತ್ತಿದ್ದಂತೆ ಸೂಚನೆ ನೀಡಿದ ಏರ್ ಟ್ರಾಫಿಕ್ ಕಂಟ್ರೋಲರ್ ಸಿಬ್ಬಂದಿಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ವಜಾಗೊಳಿಸಿದೆ.
ಏಕಕಾಲದಲ್ಲಿ ಲ್ಯಾಂಡಿಂಗ್ ಮತ್ತು ಟೇಕಾಫ್ಗೆ ಒಂದೇ ರನ್ವೇಯಲ್ಲಿ ಅನುಮತಿ ನೀಡುವುದು ಅಪಾಯಕಾರಿ ಪರಿಸ್ಥಿತಿಯನ್ನ ಸೃಷ್ಟಿಸುತ್ತದೆ. (ಏಜೆನ್ಸೀಸ್)