ಭಾರತದ ಅಭೇದ್ಯ ರಕ್ಷಣೆ ಆಕಾಶ್​ತೀರ್; ಎಂಥದ್ದೇ ದಾಳಿ ತಡೆಯಲು ಶಕ್ತ | ದೇಶದ ಯುದ್ಧತಂತ್ರದಲ್ಲಿ ಮಹತ್ವದ ಸ್ಥಿತ್ಯಂತರ

akash
Published on

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ ಬೆನ್ನಿಗೇ ಪಾಕಿಸ್ತಾನ ಭಾರತದತ್ತ ಒಂದಷ್ಟು ದಾಳಿಗಳನ್ನು ನಡೆಸಿತ್ತು. ಆದರೆ ಭಾರತದ ರಕ್ಷಣಾಪಡೆಗಳು ಅವುಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದಲ್ಲದೆ, ಪಾಕಿಸ್ತಾನದಲ್ಲಿನ 8 ವಾಯುನೆಲೆಗಳು ಸೇರಿದಂತೆ 13 ಗುರಿಗಳ ಮೇಲೆ ನಿಖರ ಹಾಗೂ ಪ್ರಮಾಣಬದ್ಧ ದಾಳಿ ನಡೆಸಿ ತಕ್ಕಶಾಸ್ತಿ ಮಾಡಿವೆ. ಭಾರತದ ಈ ಪ್ರತ್ಯುತ್ತರ ಎಷ್ಟು ತೀವ್ರವಾಗಿತ್ತೆಂದರೆ ಇದರಿಂದ ತತ್ತರಗೊಂಡ ಪಾಕ್ ಕದನವಿರಾಮದ ಮೊರೆಹೋಗಬೇಕಾಯಿತು. ಹೀಗೆ ಪಾಕಿಸ್ತಾನವನ್ನು ವಿಚಲಿತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಭಾರತದ ‘ಆಕಾಶ್​ತೀರ್’ ರಕ್ಷಣಾ ವ್ಯವಸ್ಥೆ. ಇಂಥದ್ದೊಂದು ವ್ಯವಸ್ಥೆ ಬಗ್ಗೆ ದೇಶ-ವಿದೇಶಗಳ ತಜ್ಞರಲ್ಲಿ ಕುತೂಹಲ ಕೆರಳಿರುವ ನಡುವೆಯೇ ಈ ಆಕಾಶ್​ತೀರ್ ವಿಶೇಷತೆ ಬಗ್ಗೆ ಒಂದಷ್ಟು ಮಾಹಿತಿಗಳು ಹೊರಹೊಮ್ಮಿವೆ.

ಭೇದಿಸಲಾಗದ ವ್ಯವಸ್ಥೆ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಮೇ 7ರಂದು ಆಪರೇಷನ್ ಸಿಂಧೂರ ನಡೆಸಿ ಉಗ್ರರ ನೆಲೆಗಳನ್ನು ಹೊಡೆದುರುಳಿಸಿದ್ದಕ್ಕೆ ಪಾಕಿಸ್ತಾನವು ಮೇ 9-10ರ ರಾತ್ರಿ ವೇಳೆ ಭಾರತದ ಸೇನಾ ನೆಲೆ, ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸಿತು. ಆದರೆ ಭಾರತದ ಆಕಾಶ್​ತೀರ್ ರಕ್ಷಣಾ ವ್ಯವಸ್ಥೆಯನ್ನು ಭೇದಿಸಲಾಗದೆ ಪಾಕ್​ನ ದಾಳಿಗಳು ಗುರಿ ಸಾಧಿಸುವುದರಲ್ಲಿ ವಿಫಲಗೊಂಡವು. ಪಾಕಿಸ್ತಾನದಿಂದ ಉಡಾವಣೆ ಮಾಡಲಾದ ಎಲ್ಲ ಡ್ರೋನ್, ಕ್ಷಿಪಣಿ, ಮೈಕ್ರೋ ಯುಎವಿ (ಮಾನವರಹಿತ ವೈಮಾನಿಕ ವಾಹನಗಳು-ಅನ್​ವ್ಯಾನ್ಡ್ ಏರಿಯಲ್ ವೆಹಿಕಲ್ಸ್) ಮತ್ತು ಇತರ ಯುದ್ಧಸಾಮಗ್ರಿಗಳು ಭಾರತದ ವಾಯುಪ್ರದೇಶಕ್ಕೆ ಪ್ರವೇಶಿಸದಂತೆ ತಡೆಯುವಲ್ಲಿ ಆಕಾಶ್​ತೀರ್ ಪ್ರಮುಖ ಪಾತ್ರ ವಹಿಸಿತ್ತು.

ಬೆರಗಾದ ಪಾಕ್ ತಜ್ಞರು!

ಹವಾಮಾನ, ಭೂಪ್ರದೇಶ ಮತ್ತು ರಾಡಾರ್ ತಂತ್ರಜ್ಞಾನಗಳಿಂದ ನೈಜ ಸಮಯದ ನಿರ್ಣಯಗಳನ್ನು ತೆಗೆದುಕೊಳ್ಳುವ ಜತೆಗೆ, ಅಗತ್ಯಕ್ಕೆ ತಕ್ಕಂತೆ ಕಾರ್ಯಾಚರಣೆಯನ್ನು ಮರುಮಾರ್ಗಗೊಳಿಸಿ, ಸ್ವಾಯತ್ತವಾಗಿ ದಾಳಿಗಳನ್ನು ನಡೆಸುವ ಸಾಮರ್ಥ್ಯವೇ ಆಕಾಶ್​ತೀರ್​ನ ಅತ್ಯಂತ ಪ್ರಬಲ ಸಂಗತಿ. ಇದನ್ನು ಶತ್ರುಗಳ ಕಡೆಯ ಡ್ರೋನ್, ವಿಮಾನ, ಕ್ಷಿಪಣಿಗಳನ್ನು ಪತ್ತೆ ಮಾಡುವುದಷ್ಟೇ ಅಲ್ಲದೆ, ಅವುಗಳ ಜಾಡು ಹಿಡಿದು ನಿರತಗೊಳ್ಳುವಂತೆ ವಿನ್ಯಾಸ ಮಾಡಲಾಗಿದೆ. ರಾಡಾರ್ ವ್ಯವಸ್ಥೆಗಳು, ಸೆನ್ಸರ್ಸ್ ಮತ್ತು ಸಂವಹನ ತಂತ್ರಜ್ಞಾನಗಳನ್ನು ಒಂದೇ ಕಾರ್ಯಾಚರಣೆಯ ಚೌಕಟ್ಟಿನಲ್ಲಿರುವಂತೆ ಈ ವೇದಿಕೆ ರೂಪಿಸಲಾಗಿದೆ. ಇದು ಆಜ್ಞೆ, ನಿಯಂತ್ರಣ, ಸಂಪರ್ಕ, ಗಣಕಯಂತ್ರ, ಕಣ್ಗಾವಲು ಮತ್ತು ವಿಚಕ್ಷಣೆಗಳನ್ನು ಒಳಗೊಂಡ ವಿಶಾಲವಾದ ಸಿ41ಎಸ್​ಆರ್​ನ ಭಾಗವಾಗಿದೆ. ಹೀಗಾಗಿ ಆಕಾಶ್​ತೀರ್​ಗೆ ಏಕಕಾಲದಲ್ಲಿ ವಿವಿಧ ಮೂಲಗಳಿಂದ ದತ್ತಾಂಶಗಳು ಲಭ್ಯ ಇರುತ್ತವೆ. ಇವೆಲ್ಲದರ ಸಾಮೂಹಿಕ ಪ್ರಯೋಜನದ ಮೂಲಕ ಎಲ್ಲ ದಾಳಿಗಳನ್ನು ನಿಷ್ಪಲಗೊಳಿಸುವಲ್ಲಿ ಆಕಾಶ್​ತೀರ್ ಯಶಸ್ವಿಯಾಗಿದೆ. ಇಂಥದ್ದೊಂದು ರಕ್ಷಣಾ ವ್ಯವಸ್ಥೆಯನ್ನು ನಾವು ಇದುವರೆಗೂ ನೋಡಿಲ್ಲ ಎಂಬುದಾಗಿ ಪಾಕ್​ನ ರಕ್ಷಣಾ ತಜ್ಞರು ಬೆರಗು ವ್ಯಕ್ತಪಡಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

ಕ್ಷಿಪ್ರ ಗಮನ, ನಿರ್ಧಾರ, ದಾಳಿ

ಆಕಾಶ್​ತೀರ್ ತಂತ್ರಜ್ಞಾನವು ಯುದ್ಧ ಪ್ರದೇಶಗಳಲ್ಲಿ ಕೆಳಮಟ್ಟದ ವಾಯುಪ್ರದೇಶದ ಮೇಲ್ವಿಚಾರಣೆ ಹಾಗೂ ನೆಲ ಆಧಾರಿತ ವಾಯುರಕ್ಷಣಾ ಶಸ್ತ್ರಾಸ್ತ್ರ ವ್ಯವಸ್ಥೆಗಳ ಪರಿಣಾಮಕಾರಿ ನಿಯಂತ್ರಣವನ್ನು ಅನುಮತಿಸುತ್ತದೆ. ಹೀಗಾಗಿ ಆಕಾಶತೀರ್ ಭಾರತದ ಕಾರ್ಯತಂತ್ರದ ಸಿದ್ಧಾಂತದಲ್ಲಿನ ಹೊಸ ಅಧ್ಯಾಯವಾಗಿದ್ದು, ಭಯೋತ್ಪಾದಕ ಬೆದರಿಕೆಗಳ ವಿರುದ್ಧ ರಕ್ಷಣಾತ್ಮಕ ಭಂಗಿಗಷ್ಟೇ ಸೀಮಿತವಾಗಿರದೆ, ಪೂರ್ವಭಾವಿ ಪ್ರತೀಕಾರಕ್ಕೂ ಸಜ್ಜಾಗಿರುತ್ತದೆ. ಈ ವ್ಯವಸ್ಥೆ ವಾಹನ ಆಧಾರಿತವಾಗಿದ್ದು, ಚಲನಶೀಲವಾಗಿರುವುದರಿಂದ ಶತ್ರುತ್ವದ ವಾತಾವರಣದಲ್ಲಿ ತಕ್ಷಣದಲ್ಲಿ ಸುಲಭವಾಗಿ ಕಾರ್ಯನಿರತವಾಗಬಲ್ಲದು. ಅಲ್ಲದೆ ಜಗತ್ತಿನ ಯಾವುದೇ ವ್ಯವಸ್ಥೆಗಿಂತ ವೇಗವಾಗಿ ಗಮನಿಸಿ, ನಿರ್ಧರಿಸಿ, ದಾಳಿ ನಡೆಸಬಲ್ಲದು ಎಂಬುದನ್ನು ಆಕಾಶ್​ತೀರ್ ಈಗಾಗಲೇ ಸಾಬೀತುಪಡಿಸಿದೆ. ಇವೆಲ್ಲದರಿಂದಾಗಿ ಆಕಾಶ್​ತೀರ್ ಯುದ್ಧತಂತ್ರದಲ್ಲಿನ ಮಹತ್ವದ ಸ್ಥಿತ್ಯಂತರ ಎಂದು ವಿಶ್ವಾದ್ಯಂತದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆತ್ಮನಿರ್ಭರ ಭಾರತದ ಕಲ್ಪನೆಯಂತೆ ಆಕಾಶ್​ತೀರ್ ಸಂಪೂರ್ಣ ಸ್ವದೇಶಿ ಉತ್ಪನ್ನ ವಾಗಿದೆ. ಆದರೆ ಪಾಕಿಸ್ತಾನದ್ದು ಹಾಗಲ್ಲ. ಅದು ಚೀನಾಮೂಲದ ಎಚ್​ಕ್ಯೂ-9 ಮತ್ತು ಎಚ್​ಕ್ಯೂ-16 ಒಳಗೊಂಡ ರಕ್ಷಣಾ ವ್ಯವಸ್ಥೆ ಆಗಿದ್ದು, ಭಾರತದ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಅದು ಸಂಪೂರ್ಣ ವಿಫಲಗೊಂಡಿದೆ ಎಂಬುದು ತಿಳಿದುಬಂದಿದೆ. ಅಲ್ಲದೆ, ಭಾರತದ ಸೇನೆಯಲ್ಲಿ ಆಕಾಶ್​ತೀರ್​ನ ಈ ಉಪಸ್ಥಿತಿಯು ಭಯೋತ್ಪಾದನೆಯನ್ನು ಪ್ರಾಯೋಜಿಸುವಂಥವರ ಸಾಮರ್ಥ್ಯಕ್ಕೂ ಮೀರಿದ ವಿಶ್ವಾಸವನ್ನು ನೀಡುತ್ತದೆ. ‘ಪಾಕ್​ನ ಅಣ್ವಸ್ತ್ರದ ಬ್ಲಾ್ಯಕ್​ವೆುೕಲ್​ಗೆ ಭಾರತ ಎಂದಿಗೂ ಜಗ್ಗುವುದಿಲ್ಲ. ಅಗತ್ಯಬಿದ್ದರೆ ಪಾಕ್​ನ ಗಡಿಯೊಳಕ್ಕೇ ನುಗ್ಗಿ ಭಯೋತ್ಪಾದನೆಯ ಮೂಲವನ್ನೇ ನಿಮೂಲನೆಗೊಳಿಸುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ರಕ್ಷಣಾ ಬಜೆಟ್ ಮೊತ್ತ ವೃದ್ಧಿಸಲಿರುವ ಆಪರೇಷನ್

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿರುವ ‘ಆಪರೇಷನ್ ಸಿಂಧೂರ’ದ ಯಶಸ್ಸು ರಕ್ಷಣಾ ಬಜೆಟ್ ಮೊತ್ತದಲ್ಲಿ ಸುಮಾರು 50 ಸಾವಿರ ಕೋಟಿ ರೂಪಾಯಿ ಹೆಚ್ಚಳ ಉಂಟುಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪೂರಕ ಆಯವ್ಯಯದ ಮೂಲಕ ಈ ಹೆಚ್ಚುವರಿ ಮೊತ್ತ ಲಭ್ಯವಾಗುವ ಸಾಧ್ಯತೆ ಇದ್ದು, ಇದರಿಂದ ರಕ್ಷಣಾ ಕ್ಷೇತ್ರದ ಒಟ್ಟಾರೆ ಅನುದಾನ ಏಳು ಲಕ್ಷ ಕೋಟಿ ರೂಪಾಯಿಗೆ ತಲುಪುವ ನಿರೀಕ್ಷೆ ಇದೆ ಎಂದೂ ಮೂಲಗಳು ತಿಳಿಸಿವೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1ರಂದು ಮಂಡಿಸಿದ್ದ 2025-26ನೇ ಸಾಲಿನ ಬಜೆಟ್​ನಲ್ಲಿ ಸಶಸ್ತ್ರ ಪಡೆಗಳಿಗೆ ದಾಖಲೆಯ 6.81 ಲಕ್ಷ ಕೋಟಿ ರೂ. ಮೀಸಲಿಡಲಾಗಿತ್ತು. ಇದಕ್ಕೂ ಹಿಂದಿನ ಸಾಲಿಗೆ ಹೋಲಿಸಿದರೆ ಇದು ಶೇ.9.2 ಹೆಚ್ಚಳವಾಗಿದೆ. ಅಂದರೆ, 2024-25ನೇ ಸಾಲಿನ ಬಜೆಟ್​ನಲ್ಲಿ ರಕ್ಷಣಾ ಕ್ಷೇತ್ರಕ್ಕೆ 6.22 ಲಕ್ಷ ಕೋಟಿ ರೂ. ಮೀಸಲಿಡಲಾಗಿತ್ತು.

ಈ ಹೆಚ್ಚಿಸಲಾದ ಬಜೆಟ್ ಸಂಬಂಧ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ ಪಡೆಯಲಾಗುವುದು. ಅಲ್ಲದೇ ಈ ಹೆಚ್ಚುವರಿ ಮೊತ್ತವನ್ನು ಸಂಶೋಧನೆ, ಅಭಿವೃದ್ಧಿ, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ಇತರ ಅಗತ್ಯ ಉಪಕರಣಗಳ ಖರೀದಿಗೆ ಬಳಸುವ ಸಾಧ್ಯತೆ ಇದೆ ಎಂದು ಮೂಲಗಳು ಮಾಹಿತಿ ನೀಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net