ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಸಿನಿಮಾ, ವೆಬ್ಸರಣಿ, ರಿಯಾಲಿಟಿ ಶೋಗಳಂತೆಯೇ ಇತ್ತೀಚಿನ ವರ್ಷಗಳಲ್ಲಿ ವಿಶ್ವಾದ್ಯಂತ ಶಾಲಾ ಮಕ್ಕಳು, ಕಾಲೇಜು ಯುವಕ-ಯುವತಿಯರಲ್ಲಿ ಕಾಮಿಕ್, ಅನಿಮೆ ಮತ್ತು ಸೂಪರ್ಹೀರೋ ಕ್ರೇಜ್ ಕೂಡ ಹೆಚ್ಚಾಗುತ್ತಿದೆ. ಅದಕ್ಕೆ ಪೂರಕ ಎಐ (ಕೃತಕ ಬುದ್ಧಿಮತ್ತೆ) ಪ್ರಾಬಲ್ಯ ಹರಡುತ್ತಿರುವಂತೆಯೇ, ವಿನೂತನ, ವಿಭಿನ್ನ ಪ್ರಯತ್ನಗಳು ಈ ಕ್ಷೇತ್ರದಲ್ಲಿ ಆಗುತ್ತಿವೆ. ಇಂತಹ ಸೂಪರ್ಹೀರೋ, ಅನಿಮೆ, ಕಾಮಿಕ್, ಕಾರ್ಟೂನ್ ಪಾತ್ರಗಳನ್ನು ಒಂದೆಡೆ ಸೇರಿಸಿ ‘ಕಾಮಿಕ್ ಕಾನ್’ ಹೆಸರಿನಲ್ಲಿ ಆಚರಿಸುವ ರೂಢಿಯೂ ಕೆಲ ವರ್ಷಗಳಿಂದ ನಡೆಯುತ್ತಿದೆ.
ಈಗಾಗಲೇ ಅಮೆರಿಕ, ಯೂರೋಪ್ ಸೇರಿ ಹಲವೆಡೆ ದೊಡ್ಡ ಮಟ್ಟದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಹಾಗಂತ ಭಾರತವೇನೂ ಇದರಲ್ಲಿ ಹಿಂದೆ ಬಿದ್ದಿಲ್ಲ. ಬೆಂಗಳೂರಿನಲ್ಲೂ ಕಾಮಿಕ್ ಕಾನ್ ಆಯೋಜಿಸಲಾಗಿದ್ದು ಕಾರ್ಟೂನ್, ಅನಿಮೆ, ಸೂಪರ್ಹೀರೋಗಳ ಸಂಗಮವಾಗಲಿದೆ.
ಹೌದು, ಈಗಾಗಲೇ ಬೆಂಗಳೂರಿನ ವಿವಿಧೆಡೆ 11 ಬಾರಿ ಕಾಮಿಕ್ ಕಾನ್ ಆಯೋಜಿಸಲಾಗಿದ್ದು, ಇದೀಗ 12ನೇ ಆವೃತ್ತಿಯ ಕಾಮಿಕ್ ಕಾನ್ಗೆ ದಿನಗಣನೆ ಆರಂಭವಾಗಿದೆ. ಭಾರತದ ಅತಿದೊಡ್ಡ ಪಾಪ್ ಸಂಸ್ಕೃತಿಯ ಸಂಭ್ರಮಾಚರಣೆಗೆ ಇದೇ ತಿಂಗಳ 18, 19ರಂದು ವೈಟ್ಫೀಲ್ಡ್ನ ಕೆಟಿಪಿಒ ಸಭಾಂಗಣ ಸಾಕ್ಷಿಯಾಗಲಿದೆ. ಈ ಬಾರಿ ಹಿಂದೆಂದಿಗಿಂತಲೂ ದೊಡ್ಡದಾಗಿ, ವರ್ಣರಂಜಿತವಾಗಿ ಮತ್ತು ಹೆಚ್ಚು ರೋಮಾಂಚನಕಾರಿಯಾಗಿ ಕಾರ್ಯಕ್ರಮ ನಡೆಯಲಿದೆ.
ಈ ಬಾರಿ ಹಲವು ಕಾರ್ಟೂನ್, ಕಾಮಿಕ್ ಪ್ರಕಾಶನ ಸಂಸ್ಥೆಗಳ ಜತೆ ಹೆಚ್ಚುವರಿಯಾಗಿ, ಬ್ಯಾಟ್‌ಮ್ಯಾನ್/ಏಲಿಯೆನ್ಸ್, ಡಿಸಿ ವರ್ಸಸ್ ಮಾರ್ವೆಲ್, ಗ್ರೀನ್ ಲ್ಯಾಂಟರ್ನ್, ಸಿಲ್ವರ್ ಸರ್ಫರ್ ಮತ್ತು ವಿಚ್‌ಬ್ಲೇಡ್‌ನಂತಹ ಕೃತಿಗಳ ಕೃರ್ತ ಅಮೆರಿಕದ ಹೆಸರಾಂತ ಕಾಮಿಕ್ ಪುಸ್ತಕ ಬರಹಗಾರ ರಾನ್ ಮಾರ್ಜ್ ಕಾರ್ಯಕ್ರಮದ ಅತಿಥಿಯಾಗಿರಲಿದ್ದಾರೆ. ಸೂಪರ್‌ಗರ್ಲ್, ಫೈರ್‌ಸ್ಟಾರ್ಮ್, ಮೋಲಿ ಡೇಂಜರ್ ಮತ್ತು ದಿ ರಾಂಗ್ ಅರ್ಥ್ ಕೃತಿಗಳನ್ನು ಕೊಟ್ಟ ಕಾಮಿಕ್ ಪುಸ್ತಕ ಕಲಾವಿದ ಜಮಾಲ್ ಇಗ್ಲೆ ಕೂಡ ಇರಲಿದ್ದು, ಇಬ್ಬರೂ ದಿಗ್ಗಜರು ವಿಶೇಷ ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ.