ಪಾಕಿಸ್ತಾನದ ಪ್ರಜೆಗಳು ಭಾರತದ ಪಾಲಿನ ಅತಿದೊಡ್ಡ ಆಸ್ತಿ: ಮಣಿಶಂಕರ್​ ಅಯ್ಯರ್​

ManiShankar Aiyer
Published on

ನವದೆಹಲಿ: ನೆರೆಯ ರಾಷ್ಟ್ರ ಪಾಕಿಸ್ತಾನದೊಂದಿಗೆ ಹೇಗೆ ವ್ಯವಹರಿಸಬೇಕೆಂಬ ವಿಚಾರ ತಿಳಿಯದಿದ್ದಾಗ ಭಾರತ ವಿಶ್ವಗುರು ಆಗಲು ಸಾಧ್ಯವಿಲ್ಲ ಎಂದು ಮಾಜಿ ರಾಜತಾಂತ್ರಿಕ ಅಧಿಕಾರಿ, ಕಾಂಗ್ರೆಸ್​ ನಾಯಕ ಮಣಿಶಂಕರ್​ ಅಯ್ಯರ್​ ಅಭಿಪ್ರಾಯಪಟ್ಟಿದ್ದಾರೆ.

ನೆರೆಯ ರಾಷ್ಟ್ರ ಪಾಕಿಸ್ತಾನದೊಂದಿಗೆ ಮಾತುಕತೆಯ ಅಗತ್ಯತೆಯನ್ನು ವಿದೇಶಾಂಗ ಇಲಾಖೆಯ ಮಾಜಿ ರಾಜತಾಂತ್ರಿಕ ಅಧಿಕಾರಿ, ಕಾಂಗ್ರೆಸ್​ ನಾಯಕ ಮಣಿಶಂಕರ್​ ಅಯ್ಯರ್​ ಪ್ರತಿಪಾದಿಸಿದ್ದಾರೆ. ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರ ಈ ಹೇಳಿಕೆಯ ವಿಡಿಯೋ ವೈರಲ್​ ಆಗಿದೆ.

ಅತಿದೊಡ್ಡ ಆಸ್ತಿ

1978-82ರ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಭಾರತದ ಕಾನ್ಸುಲ್​ ಜನರಲ್ ಆಗಿ​ ಸೇವೆ ಸಲ್ಲಿಸಿದ ಮಣಿಶಂಕರ್​ ಅಯ್ಯರ್​​ ಅವರ್ ಆತ್ಮಚರಿತ್ರೆ ಮೆಮೊಯಿರ್ಸ್ ಆಫ್ ಎ ಮ್ಯಾವರಿಕ್​ - ಫಸ್ಟ್​ ಫಿಫ್ಟಿ ಇಯರ್ಸ್ ​(1941-1991) ಪುಸ್ತಕವು ಮಾರುಕಟ್ಟೆ ಪ್ರವೇಶಿಸಿದೆ. ಪಾಕಿಸ್ತಾನದಲ್ಲಿ ತಾವು ರಾಜತಾಂತ್ರಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಕುರಿತು ವಿವರಿಸಲು ಪುಸ್ತಕದಲ್ಲಿ ಒಂದು ಅಧ್ಯಾಯವನ್ನು ಮೀಸಲಿಟ್ಟಿದ್ದಾರೆ.

ಪಾಕಿಸ್ತಾನದ ಕರಾಚಿಯಲ್ಲಿ ನಾನು ಭಾರತದ ಕಾನ್ಸುಲ್​ ಜನರಲ್​ ಆಗಿ ಕಾರ್ಯನಿರ್ವಹಿಸಿದ ಮೂರು ವರ್ಷಗಳು ನನ್ನ ಜೀವನದ ಒಂದು ಪ್ರಮುಖ ಅಧ್ಯಾಯ ಎಂದೇ ಹೇಳಬಹುದು. ನಮ್ಮನ್ನು ಶತ್ರುಗಳಂತೆ ಕಾಣದ ಪಾಕಿಸ್ತಾನದ ಪ್ರಜೆಗಳು ಭಾರತದ ಪಾಲಿಗೆ ಅತಿದೊಡ್ಡ ಆಸ್ತಿ ಇದ್ದಂತೆ ಎಂದು ಬಣ್ಣಿಸಿದ್ದಾರೆ.

ಪರಿಗಣಿಸುವುದಿಲ್ಲ

ನಾನು ಪಾಕಿಸ್ತಾನದಲ್ಲಿ ಭಾರತದ ಕಾನ್ಸುಲ್​ ಜನರಲ್​ ಆಗಿ ನಿಯೋಜನೆಗೊಂಡು ಮೂರು ವಾರಗಳು ಕಳೆದಿದ್ದವು. ನಾನು ಮತ್ತು ನನ್ನ ಪತ್ನಿ ಸುನೀತ್​ ಭೋಜನ ಕೂಟ ಒಂದನ್ನು ಮುಗಿಸಿಕೊಂಡು ಆಚೆ ಬರುತ್ತಿದ್ದೆವು. ಆಗ ಆಕೆ ಏಕಾಏಕಿ ಇದು ನಮ್ಮ ಶತ್ರು ರಾಷ್ಟ್ರವಲ್ಲವೇ ಎಂದು ನನ್ನನ್ನು ಪ್ರಶ್ನಿಸಿದ್ದಳು. ಈ ಪ್ರಶ್ನೆ ನಾನು ವೃತ್ತಿ ತೊರೆದು 40 ವರ್ಷಗಳು ಕಳೆದರು ಸಹ ನನ್ನನ್ನು ಇವತ್ತಿಗೂ ಸಹ ಕಾಡುತ್ತಿದೆ.

ManiShankar Aiyer

ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹಾಗೂ ನಿಲುವುಗಳು ಏನೇ ಇರಲಿ. ನಾನಂತೂ ಪಾಕಿಸ್ತಾನವನ್ನು ಶತ್ರುರಾಷ್ಟ್ರ ಎಂದು ಪರಿಗಣಿಸಲ್ಲ. ಅವರು ಸಹ ಭಾರತವನ್ನು ತಮ್ಮ ಶತ್ರುರಾಷ್ಟ್ರ ಎಂದು ಪರಿಗಣಿಸುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೂ ಮೊದಲು ಹಿಂದಿನವರು ಸಮಯ ಸಿಕ್ಕಾಗ ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಮಾತುಕತೆ ನಡೆಸುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬಿಗುಡಾಯಿಸಿದ್ದು, ನಾವು ಪಾಕಿಸ್ತಾನದ ಸರ್ಕಾರಕ್ಕೆ ಪ್ರತಿಯೊಂದು ವಿಚಾರದಲ್ಲಿ ಅಸಮ್ಮತಿ ಸೂಚಿಸುತ್ತಿದ್ದೇವೆ. ಅಲ್ಲಿನ ಸೇನೆ ಹಾಗೂ ಸರ್ಕಾರವನ್ನು ಟಾರ್ಗೆಟ್​ ಮಾಡುವ ಬದಲು ಜನರನ್ನು ಗುರಿಯಾಗಿಸಲಾಗುತ್ತಿದೆ.

ವಿಶ್ವಗುರು ಆಗಲು ಸಾಧ್ಯವಿಲ್ಲ

ಈ ರೀತಿ ಮಾಡುವುದರಿಂದ ಭಾರತದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಂಧುಗಳನ್ನು ಹೊಂದಿರುವ ಪಾಕಿಸ್ತಾನದ ಜನತೆ ಸಂತ್ರಸ್ತರಾಗುತ್ತಿದ್ದಾರೆ. ವೀಸಾ ಸಮಸ್ಯೆಯಿಂದಾಗಿ ಅವರು ಭಾರತದಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿಯಾಗದೆ ಪರದಾಡುತ್ತಿದ್ದಾರೆ. ನಾನು ಜನರಲ್​ ಕಾನ್ಸುಲ್​ ಆಗಿದ್ದ ಅವಧಿಯಲ್ಲಿ ಮೂರು ಲಕ್ಷ ಮಂದಿಗೆ ವೀಸಾ ನೀಡಿದ್ದೆ ಎಂದಿದ್ದಾರೆ.

ಕಳೆದ 9 ವರ್ಷಗಳಿಂದ ಭಾರತ ಹಾಗೂ ಪಾಕಿಸ್ತಾನ ನಡುವಿನ ಮಾತುಕತೆಯನ್ನು ನಿಲ್ಲಿಸಲಾಗಿದೆ. ನಮ್ಮ ನೆರೆಯ ರಾಷ್ಟ್ರದೊಂದಿಗೆ ಹೇಗೆ ವ್ಯವಹರಿಸಬೇಕೆಂಬ ವಿಚಾರ ತಿಳಿಯದಿದ್ದಾಗ ಭಾರತ ವಿಶ್ವಗುರು ಆಗಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್​ ನಾಯಕ ಮಣಿಶಂಕರ್​ ಅಯ್ಯರ್​ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net