

ನವದೆಹಲಿ: ಐಪಿಎಲ್-2020ಯಲ್ಲಿ ಆರ್ಸಿಬಿ ಸೋತಿದ್ದರೂ, ತಂಡದ ಸ್ಟಾರ್ ಪ್ಲೇಯರ್ ಎಬಿಡಿ ವಿಲಿಯರ್ಸ್ನ ಆಟವನ್ನೂ ಯಾರೊಬ್ಬರೂ ಮರೆತಿಲ್ಲ. ಎಬಿಡಿ ಇದ್ದ ಮೇಲೆ ಭಯವಿಲ್ಲ ಎನ್ನುತ್ತಾರೆ ಆರ್ಸಿಬಿ ಅಭಿಮಾನಿಗಳು. ನಮ್ಮ ಭಾರತದಲ್ಲೂ ಇದೇ ರೀತಿಯ ಆಟಗಾರರೊಬ್ಬರಿದ್ದಾರೆ ಎಂದು ಭಾರತದ ಕ್ರಿಕೆಟ್ ಟೀಂನ ಪ್ರಸಿದ್ಧ ಆಟಗಾರರೊಬ್ಬರು ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ನ ಮಾಜಿ ಆಟಗಾರ, ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿರುವ ಹರ್ಭಜನ್ ಸಿಂಗ್ ಭಾರತದ ಆಟಗಾರರರೊಬ್ಬರಲ್ಲಿ ಎಬಿಡಿಯನ್ನು ಕಂಡಿದ್ದಾರಂತೆ. ಮುಂಬೈ ಇಂಡಿಯನ್ಸ್ನ ಸೂರ್ಯ ಕುಮಾರ್ ಯಾದವ್ ಎಬಿಡಿಯಂತೆಯೇ ಆಡುತ್ತಾರೆ ಎಂದಿದ್ದಾರೆ ಅವರು.
'ಸೂರ್ಯ ಕುಮಾರ್ ಯಾದವ್ ಮೊದಲ ಎಸೆತದಿಂದಲೇ ರನ್ ಹೊಡೆಯಲು ಆರಂಭಿಸುತ್ತಾರೆ. ಎಲ್ಲ ರೀತಿಯ ಹೊಡೆತಗಳನ್ನು ಹೊಡೆಯುವುದು ಗೊತ್ತಿರುವ ಅವರಿಗೆ ಬೌಲಿಂಗ್ ಮಾಡುವುದು ಕಷ್ಟ. ವೇಗದ ಬೌಲಿಂಗ್ ಮಾಡಿದರೂ ತುಂಬಾ ಸಲೀಸಾಗಿ ರನ್ ಹೊಡೆಯುವುದು ಅವರಿಗೆ ಗೊತ್ತಿದೆ. ಅವರು ಭಾರತದ ಎಬಿಡಿ ಇದ್ದಂತೆ' ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದ ಸೂರ್ಯಕುಮಾರ್ ಅವರ ಹೆಸರನ್ನು ಕೈ ಬಿಟ್ಟಿದ್ದಕ್ಕೂ ಹರ್ಭಜನ್ ವಿರೋಧ ವ್ಯಕ್ತಪಡಿಸಿದ್ದರು.
2020ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ 480 ರನ್ ಹೊಡೆದುಕೊಟ್ಟಿದ್ದಾರೆ. ತಂಡದಲ್ಲಿ ಅತಿ ಹೆಚ್ಚು ರನ್ ಕೊಟ್ಟ ಬ್ಯಾಟ್ಸ್ಮೆನ್ಗಳಲ್ಲಿ ಮೂರನೇ ಸ್ಥಾನದಲ್ಲಿ ಅವರಿದ್ದಾರೆ. (ಏಜೆನ್ಸೀಸ್)