

ಕೊಚ್ಚಿ: ಭಾರತದ ಮಹಿಳಾ ಬಾಸ್ಕೆಟ್‌ಬಾಲ್ ತಂಡದ ನಾಯಕಿ ಪಿಎಸ್ ಜೀನಾ ಕ್ರೀಡಾ ಚಟುವಟಿಕೆಗಳು ಸ್ತಬ್ಧಗೊಂಡಿರುವ ನಡುವೆ ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೀನಾ ಅವರ ವಿವಾಹ ಜಾಕ್ಸನ್ ಸಿ ಜಾನ್ಸನ್ ಅವರೊಂದಿಗೆ ತ್ರಿಶ್ಶೂರ್‌ನ ಮೆಲೂರ್‌ನಲ್ಲಿ ಶನಿವಾರ ನಡೆದಿದೆ. ಸಮಾರಂಭದಲ್ಲಿ ವಧು-ವರರ ಕುಟುಂಬದ ಆಪ್ತರು ಮಾತ್ರ ಹಾಜರಿದ್ದರು ಎನ್ನಲಾಗಿದೆ.
ವಿವಾಹ ಸಮಾರಂಭದಲ್ಲಿ ಕರೊನಾ ಮಾರ್ಗಸೂಚಿಗಳನ್ನು ಪಾಲಿಸಲಾಗಿದ್ದು, ಕರೊನಾ ಹಾವಳಿಯ ನಡುವೆ ಜೀನಾ ಅವರ ಸಹ-ಆಟಗಾರ್ತಿಯರಿಗೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. 26 ವರ್ಷದ ಜೀನಾ ಅವರು 2009ರಲ್ಲಿ ಜೂನಿಯರ್ ಬಾಸ್ಕೆಟ್‌ಬಾಲ್ ತಂಡಕ್ಕೆ ಮೊದಲ ಬಾರಿ ಆಯ್ಕೆಯಾಗಿ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದರು. 2012ರಲ್ಲಿ ಅವರು ಜೂನಿಯರ್ ಬಾಸ್ಕೆಟ್‌ಬಾಲ್ ತಂಡಕ್ಕೆ ನಾಯಕಿಯಾಗಿದ್ದರು. ಜಾಕ್ಸನ್ ಸಿ ಜಾನ್ಸನ್ ಅವರು ಇಂಜಿನಿಯರ್ ಆಗಿದ್ದಾರೆ.
2017ರಲ್ಲಿ ಅವರು ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಅಮೋಘ ನಿರ್ವಹಣೆ ತೋರಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಜೀನಾ 2018ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಆಡಿದ ಭಾರತ ತಂಡಕ್ಕೆ ನಾಯಕಿಯಾಗಿದ್ದರು. ಸ್ಯಾಫ್ ಗೇಮ್ಸ್ ಜಯಿಸಿದ ಭಾರತ ತಂಡಕ್ಕೂ ಅವರು ನಾಯಕಿಯಾಗಿದ್ದರು. 2019ರಲ್ಲಿ ಆಸ್ಟ್ರೇಲಿಯನ್ ಬಾಸ್ಕೆಟ್‌ಬಾಲ್ ತಂಡ ರಿಂಗ್‌ವುಡ್ ಲೇಡಿ ಹ್ವಾಕ್ಸ್ ಪರ ಆಡಲು ಒಪ್ಪಂದ ಮಾಡಿಕೊಂಡಿದ್ದರು. ಅವರು ಕೇರಳ ರಾಜ್ಯ ವಿದ್ಯುತ್ ಮಂಡಳಿಯಲ್ಲಿ ಸೀನಿಯರ್ ಸಹಾಯಕಿಯಾಗಿದ್ದಾರೆ.
ಜೀನಾ ಕಳೆದ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಬಾಸ್ಕೆಟ್‌ಬಾಲ್ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಬೇಕಾಗಿತ್ತು. ಆದರೆ ಕರೊನಾ ಭೀತಿಯಿಂದಾಗಿ ಈ ಟೂರ್ನಿ ಮುಂದೂಡಲ್ಪಟ್ಟಿತ್ತು. ಇದೀಗ ಕ್ರೀಡಾ ಚಟುವಟಿಕೆ ಸ್ತಬ್ಧಗೊಂಡಿರುವ ನಡುವೆ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ.