

Indian student : ಭಾರತೀಯ ಮೂಲದ ವಿದ್ಯಾರ್ಥಿಯೋರ್ವ ಅಪರಿಚಿತನ ಗುಂಡೇಟಿಗೆ ಬಲಿಯಾಗಿರುವ ಆಘಾತಕಾರಿ ಘಟನೆ ಅಮೆರಿಕದ ಡಲ್ಲಾಸ್‌ನಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಚಂದ್ರಶೇಖರ್ ಪಾಲ್ (27) ಎಂದು ಗುರುತಿಸಲಾಗಿದೆ. ಈತ ಹೈದರಾಬಾದ್ ಮೂಲದ ನಿವಾಸಿ. ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಚಂದ್ರಶೇಖರ್, ಸ್ಥಳೀಯ ಪೆಟ್ರೋಲ್ ಪಂಪ್‌ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದರು. ಶುಕ್ರವಾರ ರಾತ್ರಿ ಪಂಪ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಅಪರಿಚಿತ ದುಷ್ಕರ್ಮಿಯೊಬ್ಬ ಚಂದ್ರಶೇಖರ್ ಮೇಲೆ ಗುಂಡು ಹಾರಿಸಿ ಕೊಲೆಗೈದಿದ್ದಾನೆ.
ಚಂದ್ರಶೇಖರ್ ಅವರು ಹೈದರಾಬಾದ್‌ನಲ್ಲಿ ದಂತ ಶಸ್ತ್ರಚಿಕಿತ್ಸೆಯಲ್ಲಿ ಪದವಿ ಪೂರ್ಣಗೊಳಿಸಿದ್ದರು. ಬಳಿಕ 2023 ರಲ್ಲಿ ಉನ್ನತ ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳಿದರು. ಆರು ತಿಂಗಳ ಹಿಂದೆ ಸ್ನಾತಕೋತ್ತರ ಪದವಿಯನ್ನೂ ಪೂರ್ಣಗೊಳಿಸಿದರು. ಬಳಿಕ ಶಾಶ್ವತ ಉದ್ಯೋಗವನ್ನು ಹುಡುಕುತ್ತಿದ್ದರು. ಇದರ ನಡುವೆ ಪಾರ್ಟ್ ಟೈಂ ಕೆಲಸ ಕೂಡ ಮಾಡುತ್ತಿದ್ದರು.
ಇನ್ನು ಚಂದ್ರಶೇಖರ್ ಹತ್ಯೆಗೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಅಮೆರಿಕ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದರ ನಡುವೆ ಚಂದ್ರಶೇಖರ್ ಅವರ ಮೃತದೇಹವನ್ನು ಆದಷ್ಟು ಬೇಗ ಸ್ವದೇಶಕ್ಕೆ ತರಲು ಕುಟುಂಬವು ಕೇಂದ್ರ ಸರ್ಕಾರದ ಸಹಾಯವನ್ನು ಕೋರಿದೆ.
ಈ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಮತೆ ಬಿಆರ್‌ಎಸ್ ಶಾಸಕ ಸುಧೀರ್ ರೆಡ್ಡಿ ಮತ್ತು ಮಾಜಿ ಸಚಿವ ಟಿ. ಹರೀಶ್ ರಾವ್, ಹೈದರಾಬಾದ್‌ನಲ್ಲಿರುವ ಚಂದ್ರಶೇಖರ್ ಅವರ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಸಾಂತ್ವಾನ ಹೇಳಿದ್ದಾರೆ.
ತಮ್ಮ ಮಗ ಇನ್ನು ಎತ್ತರಕ್ಕೆ ಬೆಳೆಯುತ್ತಾನೆ ಎಂದು ನಂಬಿದ್ದ ಪಾಲಕರು ಇಂದು ಅನುಭವಿಸುತ್ತಿರುವ ನೋವು ಹೃದಯ ವಿದ್ರಾವಕವಾಗಿದೆ ಎಂದು ರಾವ್ ಹೇಳಿದರು. ಚಂದ್ರಶೇಖರ್ ಅವರ ಮೃತದೇಹವನ್ನು ಆದಷ್ಟು ಬೇಗ ಅವರ ಊರಿಗೆ ತರಲು ರಾಜ್ಯ ಸರ್ಕಾರ ಮುಂದಾಗಬೇಕೆಂದು ಇದೇ ಸಂದರ್ಭದಲ್ಲಿ ಅವರು ಒತ್ತಾಯಿಸಿದರು. (ಏಜೆನ್ಸೀಸ್)