

ವಾಷಿಂಗ್ಟ್ನ್ : ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳು ನಾಪತ್ತೆಯಾಗುವುದು ಅಥವಾ ದಾಳಿಗೆ ಒಳಗಾಗುವುದು ಪದೇಪದೆ ಮರುಕಳಿಸುತ್ತಿದೆ. ಇದೀಗ ಕ್ಯಾಲಿಫೋರ್ನಿಯಾದಲ್ಲಿ 23 ವರ್ಷದ ಭಾರತೀಯ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾರೆ. ಕಳೆದೊಂದು ವಾರದಿಂದ ಆಕೆಯ ಸುಳಿವು ಸಿಕ್ಕಿಲ್ಲ. ನಾಪತ್ತೆಯಾಗಿರುವ ವಿದ್ಯಾರ್ಥಿನಿಯನ್ನು ಹೈದರಾಬಾದ್‌ನ ನಿವಾಸಿ ನಿತಿಶಾ ಕಂದುಲಾ ಎನ್ನಲಾಗಿದೆ.
ಉನ್ನತ ವಿದ್ಯಾಭ್ಯಾಸಕ್ಕಾಗಿ ನಿತಿಶಾ ಕಂದುಲಾ ಅಮೆರಿಕಾಕ್ಕೆ ತೆರಳಿದ್ದರು. ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿ ಸ್ಯಾನ್ ಬರ್ನಾರ್ಡಿನೊ(ಸಿಎಸ್ಯುಎಸ್ಬಿ)ದ ವಿದ್ಯಾರ್ಥಿನಿಯಾಗಿದ್ದ ಕಂದುಲಾ ಮೇ 28ರಿಂದ ಕಾಣೆಯಾಗಿದ್ದಾರೆ. ಕೊನೆಯದಾಗಿ ಲಾಸ್ ಏಂಜಲೀಸ್‌ನಲ್ಲಿ ಕಾಣಿಸಿಕೊಂಡಿದ್ದು, ಆಕೆ ಮೇ 30ರಂದು ಕಾಣೆಯಾಗಿರುವುದಾಗಿ ಸಿಎಸ್ಯುಎಸ್ಬಿ ಪೊಲೀಸ್ ಮುಖ್ಯಸ್ಥ ಜಾನ್ ಗುಟೈರೆಜ್ ತಿಳಿಸಿದ್ದಾರೆ.
ನಾಪತ್ತೆಯಾದ ಬಳಿಕ ಕಂದುಲಾ ಸುಳಿವ ಸಿಕ್ಕಿಲ್ಲ. ಆಕೆಯ ಪತ್ತೆಗೆ ಪೊಲೀಸರು ಸಾರ್ವಜನಿಕರ ಸಹಾಯ ಕೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ನಿತಿಶಾ ಕಂದುಲಾ ವಿವರವನ್ನು ಹಂಚಿಕೊಂಡಿದ್ದಾರೆ.
ಅಮೆರಿಕದಲ್ಲಿ ಭಾರತೀಯರು ನಾಪತ್ತೆಯಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು, 26 ವರ್ಷದ ಭಾರತೀಯ ವಿದ್ಯಾರ್ಥಿ ರೂಪೇಶ್ ಚಂದ್ರ ಚಿಂತಕಿಂಡಿ ಚಿಕಾಗೋದಲ್ಲಿ ನಾಪತ್ತೆಯಾಗಿದ್ದರು. ಏಪ್ರಿಲ್‌ನಲ್ಲಿ ಹೈದರಾಬಾದ್‌ನ ನಿವಾಸಿ 25 ವರ್ಷದ ಮೊಹಮ್ಮದ್ ಅಬ್ದುಲ್ ಅರ್ಫಾತ್ ಕ್ಲೀವ್‌ಲ್ಯಾಂಡ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಮಾರ್ಚ್ ತಿಂಗಳಿನಲ್ಲಿ ಅವರು ನಾಪತ್ತೆಯಾಗಿದ್ದರು. 2019ರಲ್ಲಿ ನ್ಯೂಜೆರ್ಸಿಯ 29 ವರ್ಷದ ಭಾರತೀಯ ವಿದ್ಯಾರ್ಥಿನಿ ಮಯೂಷಿ ಭಗತ್ ಕೂಡ ನಾಪತ್ತೆಯಾಗಿದ್ದರು. ಪತ್ತೆ ಹಚ್ಚುವ ವ್ಯಕ್ತಿಗೆ ಎಫ್ಬಿಐ 10 ಸಾವಿರ ಡಾಲರ್ ಬಹುಮಾನವನ್ನೂ ಸಹ ಘೋಷಿಸಿತ್ತು. ಇದುವರೆಗು ಮಯೂಷಿ ಮಾಹಿತಿ ಸಿಕ್ಕಿಲ್ಲ. (ಏಜೆನ್ಸೀಸ್)