

ನವದೆಹಲಿ: ಇಡೀ ವಿಶ್ವಕ್ಕೆ ಅಗತ್ಯವಾಗುವಷ್ಟು ಕೋವಿಡ್-19 ಲಸಿಕೆಗಳನ್ನು ಉತ್ಪಾದಿಸಿ, ಪೂರೈಕೆ ಮಾಡುವ ಸಾಮರ್ಥ್ಯ ಭಾರತೀಯ ಔಷಧೀಯ ಕಂಪನಿಗಳಿಗೆ ಇದೆ ಎಂದು ಮೈಕ್ರೋಸಾಫ್ಟ್ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿದ್ದಾರೆ.
ಭಾರತದಲ್ಲಿ ಹಲವು ಮುಖ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕರೊನಾ ವೈರಾಣುಗೆ ಲಸಿಕೆ ಕಂಡುಹಿಡಿಯುವುದು ಸೇರಿ ಇತರೆ ಕಾಯಿಲೆಗಳಿಗೆ ಪರಿಣಾಮಕಾರಿ ಔಷಧವನ್ನು ಉತ್ಪಾದಿಸಿ, ಪೂರೈಕೆ ಮಾಡಲು ಭಾರತದ ಔಷಧೀಯ ಕೈಗಾರಿಕೆಗಳು ಸದಾ ಶ್ರಮಿಸಿ, ಸಹಕರಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೋವಿಡ್-19 ಇಂಡಿಯಾಸ್ ವಾರ್ ಅಗೇನ್ಸ್ಟ್ ದ ವೈರಸ್ ಎಂಬ ಡಿಸ್ಕವರಿ ಪ್ಲಸ್ ಚಾನೆಲ್ನ ಕಾರ್ಯಕ್ರಮಕ್ಕಾಗಿ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಭಾರತದ ಗಾತ್ರ ಮತ್ತು ನಗರ ಪ್ರದೇಶಗಳಲ್ಲಿನ ಜನ ಸಾಂದ್ರತೆಯಿಂದಾಗಿ ಕರೊನಾ ಸೋಂಕು ನಿಯಂತ್ರಿಸುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಹೇಳಿದರು.
ಬೇರಾವುದೇ ರಾಷ್ಟ್ರಕ್ಕಿಂತಲೂ ಹೆಚ್ಚಿನ ಪ್ರಮಾಣದ ಲಸಿಕೆಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ. ಅವುಗಳಲ್ಲಿ ಸೆರಂ ಇನ್ಸ್ಟಿಟ್ಯೂಟ್ ಬಹುದೊಡ್ಡ ಸಂಸ್ಥೆಯಾಗಿದೆ. ಬಯೋ ಇ, ಭಾರತ್ ಬಯೋಟೆಕ್ ಸೇರಿ ಇನ್ನೂ ಹಲವು ಕಂಪನಿಗಳಿವೆ. ಕೋವಿಡ್-19 ಲಸಿಕೆ ಸಂಶೋಧನೆಯಲ್ಲಿ ಭಾರತೀಯ ಔಷಧೀಯ ಕಂಪನಿಗಳು ಸಾಕಷ್ಟು ಶ್ರಮಿಸುತ್ತಿವೆ. ಇದಕ್ಕಾಗಿ ಅವು ಇತರೆ ಕಾಯಿಲೆಗಳಿಗೆ ರೂಪಿಸಿರುವ ಔಷಧಗಳ ಜ್ಞಾನ ಮತ್ತು ಅನುಭವವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿವೆ ಎಂದು ತಿಳಿಸಿದರು.