More

    ಮಂಗಳ ಗ್ರಹದ ಮೇಲೆ ನಾಸಾ ಹಾರಿಸಲಿರುವ ಹೆಲಿಕಾಪ್ಟರ್​ಗೆ ಸಿಕ್ಕಿತು ಹೊಸ ಹೆಸರು, ಭಾರತೀಯ ಮೂಲದ ವಿದ್ಯಾರ್ಥಿನಿಯಿಂದ ನಾಮಕರಣ

    ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ತನ್ನ ಮುಂದಿನ ರೋವರ್​ ಜತೆ ಮಂಗಳಗ್ರಹಕ್ಕೆ ಹೆಲಿಕಾಪ್ಟರ್​ ಒಂದನ್ನು ರವಾನಿಸಲಿದೆ. ಒಂದೊಮ್ಮೆ ಈ ಹೆಲಿಕಾಪ್ಟರ್​ ಅಲ್ಲಿ ಹಾರಾಟ ಕೈಗೊಂಡರೆ, ಅನ್ಯಗ್ರಹದ ಮೇಲೆ ಹಾರಾಟ ಕೈಗೊಂಡ ಮೊದಲ ವೈಮಾನಿಕ ಸಾಧನ ಎಂಬ ಹೆಗ್ಗಳಿಕೆ ಇದರದ್ದಾಗಲಿದೆ.

    ಇಂಥ ಹೆಲಿಕಾಪ್ಟರ್​ಗೆ ಈಗ ಒಂದು ಹೆಸರು ಲಭಿಸಿದೆ. ಅದುವೇ ಇನ್​ಜೀನ್ಯುಟಿ. ಈ ಹೆಸರು ಕೊಟ್ಟವರು ಭಾರತೀಯ ಮೂಲದ ವನೀಜಾ ರೂಪಾನಿ. ಇವರು ಅಲ್ಬಾಮಾ ನಿವಾಸಿಯಾಗಿದ್ದು, ಹೈಸ್ಕೂಲ್​ ಜೂನಿಯರ್​ ಗ್ರೇಡ್​ ವಿದ್ಯಾರ್ಥಿನಿಯಾಗಿದ್ದಾರೆ.

    ಪ್ರಬಂಧ ಸ್ಪರ್ಧೆಯಲ್ಲಿ ಆಯ್ಕೆ: ಹೆಲಿಕಾಪ್ಟರ್​ಗೆ ನಾಮಕರಣ ಮಾಡಲು ನಾಸಾ ಇತ್ತೀಚೆಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿತ್ತು. ಕೆ-12 (ಹೈಸ್ಕೂಲ್​ ಜೂನಿಯರ್​ ಗ್ರೇಡ್​) ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಈ ಸ್ಪರ್ಧೆಗೆ 28 ಸಾವಿರ ವಿದ್ಯಾರ್ಥಿಗಳು ಪ್ರಬಂಧಗಳನ್ನು ರವಾನಿಸಿದ್ದರು. ಅದರಲ್ಲಿ ವನೀಜಾ ರೂಪಾನಿ ಕೂಡ ಒಬ್ಬರಾಗಿದ್ದರು.
    ಆ ಪ್ರಬಂಧದಲ್ಲಿ ವನೀಜಾ ಅವರು, ಅನ್ಯಗ್ರಹದ ಮೇಲೆ ವೈಮಾನಿಕ ಸಾಧನವನ್ನು ಹಾರಿಸುವ ಆಲೋಚನೆಯೇ ವಿಶಿಷ್ಠವಾದದ್ದು. ಇಂಥ ಚಮತ್ಕಾರದ ಮೂಲಕ ಬಾಹ್ಯಾಕಾಶ ಸಂಶೋಧನೆಯ ಆಶ್ಚರ್ಯಕರ ಸಂಗತಿಯನ್ನು ಹೊರಹಾಕುವ ಮಾರ್ಗದಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇಂಥ ಸಾಹಸ ಮಾಡುವಲ್ಲಿ ಜನರ ಚಮತ್ಕಾರಿ ಆಲೋಚನೆ ಮತ್ತು ಬುದ್ಧಿವಂತಿಕೆ (Ingenuity and Brilliance) ಎರಡರ ಸಮ್ಮಿಶ್ರಣ ಅಗತ್ಯವಾಗಿದೆ ಎಂದು ಬರೆದಿದ್ದರು.

    ಈ ಸಾಲುಗಳಿಗೆ ಮನಸೋತ ನಾಸಾದ ವಿಜ್ಞಾನಿಗಳು ಮಂಗಳ ಗ್ರಹದ ಮೇಲೆ ಹಾರಿಬಿಡುವ ಹೆಲಿಕಾಪ್ಟರ್​ಗೆ ಇನ್​ಜೀನ್ಯುಟಿ (Ingenuity) ಎಂದು ಹೆಸರು ಇಡಲು ನಿರ್ಧರಿಸಿದ್ದಾರೆ. ಟ್ವೀಟ್​ ಮೂಲಕ ಈ ವಿಷಯ ತಿಳಿಸಿರುವ ನಾಸಾ, ನಮ್ಮ ಮಂಗಳಗ್ರಹದ ಹೆಲಿಕಾಪ್ಟರ್​ಗೆ ಹೊಸ ಹೆಸರು ಲಭಿಸಿದೆ! ಅದುವೇ ಇನ್​ಜೀನ್ಯುಟಿ. ವಿದ್ಯಾರ್ಥಿನಿ ವನೀಜಾ ರೂಪಾನಿ ಅವರು ರೋವರ್​ಗೆ ಹೆಸರು ಕೊಡಿ ಎಂಬ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡು, ಹೆಲಿಕಾಪ್ಟರ್​ಗೆ ಈ ಹೆಸರು ಕೊಟ್ಟಿದ್ದಾರೆ. ಇನ್​ಜೀನ್ಯುಟಿ ಪರ್ಸಿವರೆನ್ಸ್​ ಎಂಬ ರೋವರ್​ನ ಬೆನ್ನೇರಿ ಮಂಗಳ ಗ್ರಹವನ್ನು ತಲುಪಿ, ಅನ್ಯ ಗ್ರಹದಲ್ಲಿ ಹಾರಾಟ ಕೈಗೊಂಡ ಮೊದಲ ವೈಮಾನಿಕ ಸಾಧನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದೆ.

    ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರಿ ಆಸಕ್ತಿ: ವನೀಜಾ ರೂಪಾನಿಗೆ ಚಿಕ್ಕಂದಿನಿಂದಲೂ ಬಾಹ್ಯಾಕಾಶ ವಿಜ್ಞಾನದಲ್ಲಿ ತುಂಬಾ ಆಸಕ್ತಿ ಇರುವುದಾಗಿ ಅವರ ತಾಯಿ ನೌಶೀನ್​ ರೂಪಾನಿ ತಿಳಿಸಿದ್ದಾರೆ.

    ಅಪ್ಪ ಮತ್ತು ಮಗಳು ಕಾರಿನಲ್ಲಿ ಹೋಗುವಾಗ ಸ್ಪೇಸ್​ಶಿಪ್​ನಲ್ಲಿ ಹೋಗುತ್ತಿರುವಂತೆ ಭಾವಿಸುತ್ತಿದ್ದರು. ಕಟ್ಟಡಗಳನ್ನು ಗ್ರಹಗಳಾಗಿ, ಸಿಗ್ನಲ್​ ದೀಪಗಳನ್ನು ನಕ್ಷತ್ರಗಳೆಂದು ಭಾವಿಸುತ್ತಾ, ಅವುಗಳಿಗೆ ಹೆಸರು ಕೊಡುತ್ತಿದ್ದರು ಎಂದು ವಿವರಿಸಿದ್ದಾರೆ.

    ಮಂಗಳ ಗ್ರಹದ ಮೇಲೆ ಹಾರಾಟ ಕೈಗೊಳ್ಳಲಿರುವ ಹೆಲಿಕಾಪ್ಟರ್​ ಅನ್ನು ವಿನ್ಯಾಸಗೊಳಿಸುವಲ್ಲಿ ಚಮತ್ಕಾರಿ ಆಲೋಚನೆ ಮತ್ತು ಬುದ್ಧಿವಂತಿಕೆ ಕೆಲಸ ಮಾಡಿದೆ. ಹಾಗಾಗಿಯೇ ನಾನು ಅದಕ್ಕೆ ಇನ್​ಜೀನ್ಯುಟಿ ಎಂಬ ಹೆಸರು ಸೂಕ್ತ ಎಂಬ ನಿರ್ಧಾರಕ್ಕೆ ಬಂದೆ. ಆ ಹೆಸರು ಆಯ್ಕೆಯಾಗಿ, ನಾನು ಆ ಇತಿಹಾಸದ ಭಾಗವಾಗಲಿರುವುದಕ್ಕೆ ಸಂತಸವಾಗುತ್ತಿದೆ ಎಂದು ವನೀಜಾ ರೂಪಾನಿ ತಿಳಿಸಿದ್ದಾರೆ.

    ಸದ್ಯಕ್ಕಂತೂ ಕರೊನಾ ಪಿಡುಗಿನಿಂದ ಜಗತ್ತು ಮುಕ್ತವಾಗಲ್ಲವಂತೆ… ಹಾಗಾದರೆ ಯಾವಾಗ ಆಗಬಹುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts