More

    ಪತ್ನಿಯನ್ನು ಕೊಂದ ಆರೋಪಿ ಪತ್ತೆಗೆ 2 ಕೋಟಿ ನಗದು ಬಹುಮಾನ ಘೋಷಣೆ! ಭಾರತೀಯನ ಹಿಂದೆ ಬಿದ್ದ ಅಮೆರಿಕ

    ನ್ಯೂಯಾರ್ಕ್​: ಅಮೆರಿಕದ ತನಿಖಾ ಸಂಸ್ಥೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್​ಬಿಐ) ಸುಮಾರು 9 ವರ್ಷಗಳಿಂದ ಓರ್ವ ಭಾರತೀಯನಿಗಾಗಿ ಹುಡುಕಾಟ ನಡೆಸುತ್ತಿದೆ. ಆತನ ಬಂಧನಕ್ಕೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಇತ್ತೀಚೆಗೆ ಆತನನ್ನು ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳ ಪಟ್ಟಿಗೆ ಅಮೆರಿಕ ಸೇರಿಸಿದೆ. ಅಲ್ಲದೆ, ಆತನ ಬಗ್ಗೆ ಮಾಹಿತಿ ನೀಡಿದವರಿಗೆ ಭಾರಿ ಬಹುಮಾನವನ್ನೂ ಘೋಷಿಸಲಾಗಿದೆ. ಸುಳಿವು ಕೊಟ್ಟವರಿಗೆ 2 ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ಹಾಗಾದರೆ, ಆ ಭಾರತೀಯ ಯಾರು? ಈತನ ಮೇಲೆ ಇಷ್ಟೊಂದು ಬಹುಮಾನ ಘೋಷಣೆ ಮಾಡಿದ್ದು ಯಾಕೆ? ಆತ ಯಾಕೆ ತಲೆಮರೆಸಿಕೊಂಡಿದ್ದಾನೆ ಎಂಬಿತ್ಯಾದಿ ವಿವರಗಳು ತಿಳಿಯಬೇಕಾದರೆ ಈ ಸ್ಟೋರಿಯನ್ನೂ ಓದಲೇಬೇಕು.

    ಸುಮಾರು ಒಂಬತ್ತು ವರ್ಷಗಳ ಹಿಂದೆ ಅಮೆರಿಕದಲ್ಲಿ ತನ್ನ ಪತ್ನಿಯನ್ನು ಅತ್ಯಂತ ಭೀಕರವಾಗಿ ಕೊಂದು ಭಾರತೀಯ ಮೂಲದ ವ್ಯಕ್ತಿಯೊಬ್ಬ ಪರಾರಿಯಾಗಿದ್ದ. 2015ರ ಏಪ್ರಿಲ್ 12ರಂದು ಮೇರಿಲ್ಯಾಂಡ್‌ನ ಹ್ಯಾನೋವರ್‌ನಲ್ಲಿ ಈ ದುಷ್ಕೃತ್ಯ ಬೆಳಕಿಗೆ ಬಂದಿತ್ತು. ಆರೋಪಿ ಭದ್ರೇಶ್ ಕುಮಾರ್ ಚೇತನ್ ಭಾಯಿ ಪಟೇಲ್ ಎಂಬ ಭಾರತೀಯ ವ್ಯಕ್ತಿ ತನ್ನ ಪತ್ನಿ ಪಾಲಕ್ ಎಂಬಾಕೆಯನ್ನು ಚಾಕುವಿನಿಂದ ಇರಿದು ಬರ್ಬರವಾಗಿದೆ ಕೊಂದಿದ್ದಾನೆ. ಅಂದಿನಿಂದ, ಯುಎಸ್ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಆತನಿಗಾಗಿ ಹುಡುಕಾಟ ನಡೆಸುತ್ತಿದೆ.

    ಇದರ ನಡುವೆ ಎಫ್‌ಬಿಐ ಇತ್ತೀಚೆಗೆ ಭದ್ರೇಶ್‌ನನ್ನು ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳ ಪಟ್ಟಿಗೆ ಸೇರಿಸಿದ್ದು, ಆರೋಪಿಯ ತಲೆಗೆ ಭಾರಿ ಬಹುಮಾನವನ್ನೂ ಘೋಷಿಸಿದೆ. ಆತ ಇರುವ ಸ್ಥಳವನ್ನು ಬಹಿರಂಗಪಸಿದವರಿಗೆ 2.5 ಲಕ್ಷ ಡಾಲರ್ (ಭಾರತೀಯ ಕರೆನ್ಸಿಯಲ್ಲಿ 2.1 ಕೋಟಿ ರೂ.) ನೀಡುವುದಾಗಿ ಅಮೆರಿಕ ಹೇಳಿದೆ.

    ಆರೋಪಿ ಭದ್ರೇಶ್​ ಪಟೇಲ್ ಮತ್ತು ಅವರ ಪತ್ನಿ ಪಾಲಕ್ ಸ್ಥಳೀಯ ಡಂಕಿನ್ ಡೋನಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಕೊಲೆಯಾದ ದಿನ ಇಬ್ಬರೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯರಾತ್ರಿ ಭದ್ರೇಶ್ ಅಂಗಡಿಯ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ಪಾಲಕ್ ಬಳಿ ಹೋಗಿ ಚಾಕುವಿನಿಂದ ಹಲ್ಲೆ ನಡೆಸಿದ. ಹಲವು ಬಾರಿ ಚಾಕುವಿನಿಂದ ಇರಿದು, ಪತ್ನಿ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಅಲ್ಲಿಂದ ಪರಾರಿಯಾದನು. ಇದಕ್ಕೆ ಸಂಬಂಧಿಸಿದಂತೆ ಎಫ್‌ಬಿಐ ಪ್ರಕರಣ ದಾಖಲಿಸಿಕೊಂಡಿದೆ.

    ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ಭದ್ರೇಶ್ ತನ್ನ ಅಪಾರ್ಟ್‌ಮೆಂಟ್‌ಗೆ ಬಂದು ಕೆಲ ವಸ್ತುಗಳನ್ನು ತೆಗೆದುಕೊಂಡು ನ್ಯೂಜೆರ್ಸಿ ವಿಮಾನ ನಿಲ್ದಾಣಕ್ಕೆ ತೆರಳಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಅಂದಿನಿಂದ ಆತ ಪತ್ತೆಯಾಗಿಲ್ಲ. ಎಫ್‌ಬಿಐ ಆತನನ್ನು ಹುಡುಕುತ್ತಲೇ ಇದೆ. 2017ರಲ್ಲಿ ಭದ್ರೇಶ್​ನನ್ನು ಟಾಪ್ ಟೆನ್ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳ ಪಟ್ಟಿಯಲ್ಲಿ ಸೇರಿಸಲಾಯಿತು. ಇತ್ತೀಚೆಗೆ 2.5 ಲಕ್ಷ ಡಾಲರ್ ಬಹುಮಾನ ಘೋಷಿಸಿದೆ.

    ಭದ್ರೇಶ್ ಭಾರತಕ್ಕೆ ಮರಳುವ ವಿಚಾರದಲ್ಲಿ ಉಂಟಾದ ಗಲಾಟೆಯಲ್ಲಿ ಈ ದುಷ್ಕೃತ್ಯ ಎಸಗಿರಬಹುದು ಎಂದು ತನಿಖಾಧಿಕಾರಿಗಳು ಪ್ರಾಥಮಿಕ ತನಿಖೆಯಲ್ಲಿ ದೃಢಪಡಿಸಿದ್ದಾರೆ. ಘಟನೆಯ ನಂತರ ಆರೋಪಿ ಭದ್ರೇಶ್ ಕೆನಡಾ ಅಥವಾ ಭಾರತಕ್ಕೆ ವಾಪಸ್ ಹೋಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಅದಕ್ಕಾಗಿಯೇ ಈತನ ಪತ್ತೆಯನ್ನು ಬಹಿರಂಗಪಡಿಸಿದರೆ ಭಾರಿ ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ.

    ಭದ್ರೇಶ್​ ಕುರಿತು ಎಫ್‌ಬಿಐ ಬಾಲ್ಟಿಮೋರ್ ಫೀಲ್ಡ್ ಆಫೀಸ್​ನ ವಿಶೇಷ ಏಜೆಂಟ್ ಇನ್ ಚಾರ್ಜ್, ಗಾರ್ಡನ್ ಬಿ ಜಾನ್ಸನ್ ಮಾತನಾಡಿ, ಭದ್ರೇಶ್​ಕುಮಾರ್ ಪಟೇಲ್​ನನ್ನು ಮೋಸ್ಟ್ ವಾಂಟೆಡ್ ಕ್ರಿಮಿನಲ್​​ಗಳ ಪಟ್ಟಿಯಲ್ಲಿ ಸೇರಿಸಲು ಆತ ಮಾಡಿದ ಅಪರಾಧದ ಸ್ವರೂಪ ಕಾರಣ. ಕೊಲೆಯು ಅತ್ಯಂತ ಹಿಂಸಾತ್ಮಕವಾಗಿದೆ. ಸಾರ್ವಜನಿಕರ ಸಹಕಾರ ಮತ್ತು ನಮ್ಮ ತನಿಖಾಧಿಕಾರಿಗಳ ನಿರಂತರ ಪ್ರಯತ್ನಗಳು ಭದ್ರೇಶಕುಮಾರ್​ನನ್ನು ಹಿಡಿಯಲು ಸಹಾಯ ಮಾಡುತ್ತದೆ. ಶೀಘ್ರದಲ್ಲೇ ಆತನನ್ನು ನ್ಯಾಯಾಲಯಕ್ಕೆ ಒಪ್ಪಿಸುತ್ತೇವೆ ಎಂದರು. (ಏಜೆನ್ಸೀಸ್​)

    ನಾನೇನಾದ್ರೂ ಅಲ್ಲಿದ್ದಿದ್ದರೆ ಕಪಾಳಕ್ಕೆ ಬಾರಿಸುತ್ತಿದ್ದೆ: ಕಾಮೆಂಟರಿ ನಡುವೆ ಸ್ಟಾರ್​ ಕ್ರಿಕೆಟಿಗನ ವಿರುದ್ಧ ಭಜ್ಜಿ ಆಕ್ರೋಶ

    ಗುರುತು ಹಿಡಿಯಲಾರದಷ್ಟು ಬದಲಾದ್ರು ಸೌತ್​ ಬ್ಯೂಟಿ! ಏನಾಯಿತು ನಟಿ ಲಕ್ಷ್ಮೀ ಮೆನನ್​ಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts