17ಬಾರಿ ಇರಿದು ಪತ್ನಿ ಹತ್ಯೆಗೈದ ಭಾರತೀಯನಿಗೆ ಅಮೇರಿಕಾ ನ್ಯಾಯಾಲಯ ಕೊಟ್ಟ ಶಿಕ್ಷೆ ಏನು?

Merin
Published on

ಹೂಸ್ಟನ್(ಅಮೆರಿಕಾ): ತನ್ನ ಪತ್ನಿಯನ್ನು 17 ಬಾರಿ ಇರಿದು, ಮೃತದೇಹವನ್ನು ಕಾರ್​ಗೆ ಕಟ್ಟಿಕೊಂಡು ನೆಲದ ಮೇಲೆ ಎಳೆದಾಡಿದ್ದ ಭಾರತೀಯ ಮೂಲದ ವ್ಯಕ್ತಿಗೆ ಅಮೆರಿಕದ ಫ್ಲೋರಿಡಾ ರಾಜ್ಯದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು.

ಕೇರಳದ ಕೊಟ್ಟಾಯಂನ ಮೊನಿಪ್ಪಲ್ಲಿ ಮೂಲದ ಮೆರಿನ್ ಜಾಯ್ (27) ಯುಎಸ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರನ್ನು 2020ರ ಜುಲೈ 28 ರಂದು ದಕ್ಷಿಣ ಫ್ಲೋರಿಡಾದ ಕೋರಲ್ ಸ್ಪ್ರಿಂಗ್ಸ್‌ನಲ್ಲಿರುವ ತನ್ನ ಕೆಲಸದ ಸ್ಥಳದ ಪಾರ್ಕಿಂಗ್ ಸ್ಥಳದಲ್ಲಿ ಆಕೆಯ ಪತಿ ವೆಲಿಯನಾಡ್‌ ಮೂಲದ ಫಿಲಿಪ್ ಮ್ಯಾಥ್ಯೂ (34) ಬರ್ಬರವಾಗಿ ಹತ್ಯೆ ಮಾಡಿದ್ದ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಫಿಲಿಪ್‌ 17 ಬಾರಿ ಮೆರಿನ್‌ಗೆ ಇರಿದಿದ್ದು, ನಂತರ ಆಕೆಯನ್ನು ಕಾರಿಗೆ ಕಟ್ಟಿಕೊಂಡು ನೆಲದ ಮೇಲೆ ಎಳೆದುಕೊಂಡು ಹೋಗಿದ್ದ.

ನ್ಯಾಯಾಲಯವು ಫಿಲಿಪ್‌ಗೆ ಪೆರೋಲ್ ಇಲ್ಲದೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ, ಮೆರಿನ್ ಹತ್ಯೆಯಾದಾಗ ಆಕೆಗೆ 2 ವರ್ಷದ ಹೆಣ್ಣುಮಗು ನೋರಾ ಇತ್ತು. ಮಗುವಿನ ಮುಖ ನೋಡಿ ಬಿಟ್ಟುಬಿಡು ಎಂದರೂ ಫಿಲಿಪ್ ಮೃಗದಂತೆ ವರ್ತಿಸಿ ಪತ್ನಿಯನ್ನು ಕೊಂದುಹಾಕಿದ್ದ.

ಜೀವಾವಧಿ ಶಿಕ್ಷೆ ಖಚಿತವಾಗುತ್ತಿದ್ದಂತೆ ಫಿಲಿಪ್‌ ಮೇಲ್ಮನವಿ ಸಲ್ಲಿಸುವುವ ಹಕ್ಕನ್ನು ಬಿಟ್ಟುಕೊಡುತ್ತಿರುವುದರಿಂದ ಮರಣದಂಡನೆಯನ್ನು ಮನ್ನಾ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಮಾರಣಾಂತಿಕ ಆಯುಧದಿಂದ ಆಕ್ರಮಣ ನಡೆಸಿದ್ದಕ್ಕಾಗಿ ಗರಿಷ್ಠ ಐದು ವರ್ಷ ಹೆಚ್ಚುವರಿ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ರಾಜ್ಯ ವಕೀಲರ ಕಚೇರಿಯ ವಕ್ತಾರ ಪೌಲಾ ಮೆಕ್ ಮಹೊನ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net