ಲಾಕ್​ಡೌನ್​ ಇದ್ದರೂ ಕಿರುಚಿತ್ರ ಚಿತ್ರೀಕರಣ ಮಾಡಿದ ದಿಗ್ಗಜ ಕಲಾವಿದರು; ಇದು ಲಾಕ್​ಡೌನ್​ ಫ್ಯಾಮಿಲಿ ಕಥೆ!

ಅಮಿತಾಬ್
Published on

ಬೆಂಗಳೂರು: ಲಾಕ್​ಡೌನ್​ ಚಾಲ್ತಿಯಲ್ಲಿದೆ. ಸಿನಿಮಾರಂಗ ಸ್ಥಗಿತಗೊಂಡಿದೆ. ಈ ನಡುವೆ "ಫ್ಯಾಮಿಲಿ' ಹೆಸರಿನ ಕಿರು ಸಿನಿಮಾ ಶೂಟಿಂಗ್​ ಮಾಡಲಾಗಿದೆ. ಅದೂ ಭಾರತೀಯ ಸಿನಿಮಾರಂಗ ಕಂಡ ಘಟಾನುಘಟಿ ಕಲಾವಿದರೇ ಆ ಚಿತ್ರದಲ್ಲಿ ನಟಿಸಿದ್ದಾರೆ ಎಂಬುದಿಲ್ಲಿ ವಿಶೇಷ! ಅರೇ.. ಚಿತ್ರೀಕರಣಕ್ಕೆ ತಡೆಯಾಜ್ಞೆ ಇರುವುದರಿಂದ ಅದ್ಹೇಗೆ ಶೂಟಿಂಗ್​ ಮಾಡಿದರು ಎಂಬ ಪ್ರಶ್ನೆ ಮೂಡುವುದು ಸಹಜ. ಹಾಗಾದರೆ, ಇನ್ನೇಕೆ ತಡ ಆ ಕಿರುಚಿತ್ರ ನೋಡಿ. ಅದನ್ನು ಹೇಗೆ ಶೂಟ್​ ಮಾಡಿದ್ದಾರೆ ಎಂಬ ಅಚ್ಚರಿ ಮತ್ತು ಕುತೂಹಲ ಎರಡೂ ತಣಿಯಲಿದೆ.
ಅಂದಹಾಗೆ, ಬಾಲಿವುಡ್​ನಿಂದ ಅಮಿತಾಬ್​ ಬಚ್ಚನ್​, ಆಲಿಯಾ ಭಟ್​, ದಿಲ್ಜೀತ್​ ದೋಸಾಂಜೆ, ರಣಬೀರ್​ ಕಪೂರ್​, ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡರೆ, ಕಾಲಿವುಡ್​ನಿಂದ ಸೂಪರ್​ಸ್ಟಾರ್​ ರಜನಿಕಾಂತ್​, ಸ್ಯಾಂಡಲ್​ವುಡ್​ನಿಂದ ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್​, ಟಾಲಿವುಡ್​ನಿಂದ ಚಿರಂಜೀವಿ, ಮಾಲಿವುಡ್​ ಮೋಹನ್​ ಲಾಲ್​, ಮೊಮ್ಮುಟ್ಟಿ "ಫ್ಯಾಮಿಲಿ' ಕಿರುಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಲಾಕ್​ಡೌನ್​ ಹಿನ್ನೆಲೆಯಲ್ಲಿ ಅವರವರ ಮನೆಯಲ್ಲಿದ್ದುಕೊಂಡೇ ಎಲ್ಲ ದಿಗ್ಗಜ ನಟರು "ಫ್ಯಾಮಿಲಿ' ಕಿರುಚಿತ್ರಕ್ಕೆ ದೃಶ್ಯಗಳನ್ನು ಕಳುಹಿಸಿದ್ದಾರೆ. ಅದೆಲ್ಲವನ್ನು ಒಟ್ಟುಗೂಡಿಸಿ ನಿರ್ದೇಶಕ ಪ್ರಸೂನ್​ ಪಾಂಡೆ ಕಿರುಚಿತ್ರ ಮಾಡಿದ್ದಾರೆ. ಇಡೀ ಕಿರುಚಿತ್ರವನ್ನು ಬ್ಲಾಕ್​ ಆ್ಯಂಡ್​ ವೈಟ್​ ಬ್ಯಾಕ್​ಗ್ರೌಂಡ್​ನಲ್ಲಿ ಚಿತ್ರಿಸಲಾಗಿದ್ದು, ಅಷ್ಟೇ ಗುಣಮಟ್ಟದ ಕಂಟೆಂಟ್​ ನೀಡಿದ್ದಾರೆ ನಿರ್ದೇಶಕರು.
ವಿಶೇಷ ಏನೆಂದರೆ, ಈ ಕಿರುಚಿತ್ರದಲ್ಲಿ ಎಲ್ಲ ದಿಗ್ಗಜ ನಟರು ಒಂದೇ ಕುಟುಂಬದವರಾಗಿರುತ್ತಾರೆ. ಮನೆಯ ಹಿರಿಯ ಅಮಿತಾಬ್​ ಬಚ್ಚನ್​ ಕನ್ನಡಕ ಕಾಣೆಯಾಗುತ್ತದೆ. ಅದನ್ನು ಹುಡುಕುವುದೇ ಕಥೆ. ಕೊನೆಗೆ ಇಡೀ ಭಾರತೀಯ ಚಿತ್ರರಂಗವೇ ಒಂದು ಕುಟುಂಬ ಎಂಬಂತೆ ತೋರಿಸಲಾಗಿದೆ. ಆಯಾ ಇಂಡಸ್ಟ್ರಿಗೆ ಸಂಬಂಧಿಸಿದ ಕಲಾವಿದರೆಲ್ಲ ತಂತಮ್ಮ ಭಾಷೆಯಲ್ಲಿಯೇ ಡೈಲಾಗ್​ ಒಪ್ಪಿಸಿದ್ದು ನೋಡುಗರಿಗೆ ಮತ್ತಷ್ಟು ಹತ್ತಿರವೆನಿಸುತ್ತದೆ. ನಿನ್ನೆ ಬಿಡುಗಡೆ ಆಗಿರುವ ಈ ಕಿರುಚಿತ್ರ ಯೂಟ್ಯೂಬ್​ನಲ್ಲಿದ್ದು, ಎಲ್ಲ ತಾರೆಗಳು ತಮ್ಮ ಜಾಲತಾಣದಲ್ಲಿ ಅದರ ಕೊಂಡಿಯನ್ನು ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net